ಗದಗ: ಗಂಡನನ್ನು ಕಳೆದುಕೊಂಡ ಮಹಿಳೆಯೋರ್ವರು ಚಿಕ್ಕ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಮತ್ತೊಂದು ಹೋಟೆಲ್ನವರು ಇವರಿಗೆ, ಹೋಟೆಲ್ಗೆ ಬರುವವರೊಂದಿಗೆ ಸಂಬಂಧ ಕಟ್ಟಿ ಹಿಂಸೆ ನೀಡಿದ್ದಾರೆ. ನಿನ್ನೆ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಥಳಿಸಿದ್ದು, ರಕ್ಷಣೆಗೆ ಬಂದವರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಇದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿಯಲ್ಲಿ ಮೊನ್ನೆ ನಡೆದ ಘಟನೆ. ಹಳ್ಳಿಕೇರಿ ಗ್ರಾಮದ ಮಹಿಳೆ ದ್ರಾಕ್ಷಾಯಣಿ ತನ್ನ ಗಂಡನನ್ನು ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ. ಇವರು ಚಿಕ್ಕ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಹೋಟೆಲ್ ಎದುರಿರುವ ಇನ್ನೊಂದು ಹೋಟೆಲ್ ಮಾಲೀಕರು ಇವರ ಮೇಲೆ ಹೋಟೆಲ್ಗೆ ಬರುವ ಗಿರಾಕಿಗಳ ಜೊತೆಗೆ ಅನೈತಿಕ ಸಂಬಂಧ ಕಟ್ಟಿದ್ದಾರೆಂದು ಹಲ್ಲೆಗೊಳಗಾದ ದ್ರಾಕ್ಷಾಯಣಿ ಆರೋಪಿಸಿದ್ದಾರೆ.
ನಾಲ್ಕೈದು ಜನ ಪುರುಷರು, ಮಹಿಳೆಯರು ಸೇರಿ ಅವರನ್ನು ಅರೆಬೆತ್ತಲೆಗೊಳಿಸಿ ನಡು ರಸ್ತೆಯಲ್ಲಿ ಎಳೆದೊಯ್ದು ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದವರ ಮೇಲೂ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಓರ್ವ ಗರ್ಭಿಣಿ ಕೂಡ ಇದ್ದರು ಎಂದು ಹೇಳಲಾಗಿದೆ.
ಗಾಯಗೊಂಡ ಮಹಿಳೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮುಂಡರಗಿ ಪೊಲೀಸರು ನಮ್ಮ ರಕ್ಷಣೆಗೆ ಬರುತ್ತಿಲ್ಲವೆಂದು ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: 'ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ನೀಡುವುದಾಗಿ ಹೇಳಿದ್ಧ ಸಿದ್ದರಾಮಯ್ಯ ವಚನಭ್ರಷ್ಟರಾದರು'