ಗದಗ: ಸರ್ಕಾರಿ ಬಸ್ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕ ಸೇರಿ ಆರು ಜನ ಮೃತಪಟ್ಟಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ.
ಶಿವಕುಮಾರ ಕಲಶೆಟ್ಟಿ (50), ಚಂದ್ರಕಲಾ ಕಲಶೆಟ್ಟಿ(40), ರಾಣಿ ಕಲಶೆಟ್ಟಿ (32), ದಿಂಗಾಲೇಶ್ ಕಲಶೆಟ್ಟಿ(5), ಸಚಿನ್ ಕತ್ತಿ(33) ಹಾಗೂ ದಾಕ್ಷಾಯಿಣಿ ಕತ್ತಿ (31) ಮೃತ ದುರ್ದೈವಿಗಳು. ಸ್ಥಳದಲ್ಲಿಯೇ ಐವರು ಮೃತಪಟ್ಟರೆ, ಚಿಕಿತ್ಸೆ ಫಲಿಸದೇ ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಬಾಲಕನೊಬ್ಬ ಕೊನೆಯುಸಿರೆಳೆದಿದ್ದಾನೆ.
ಇನ್ನು ಗಂಭೀರವಾಗಿ ಗಾಯಗೊಂಡ ಮಹೇಶ್, ಅನಿತಾ, ಅಲ್ಲಮಪ್ರಭು ಈ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಹಾಗೂ ಗಾಯಾಳುಗಳು ಒಂದೇ ಕುಟುಂಬಸ್ಥರಾಗಿದ್ದು, ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಮಾದನ ಹಿಪ್ಪರಗಿ ಹಾಗೂ ಅಫಜಲಪುರ ನಿವಾಸಿಗಳು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ: ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು
ಟಾಟಾ ಸುಮೋದಲ್ಲಿದ್ದವರು ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಭೇಟಿ ನೀಡುವ ಉದ್ದೇಶದಿಂದ ಕಲಬುರಗಿಯಿಂದ ಗಜೇಂದ್ರಗಡ ಮಾರ್ಗವಾಗಿ ಬರುತ್ತಿದ್ದರು. ಅದೇ ಮಾರ್ಗದಲ್ಲಿ ಸಾರಿಗೆ ಬಸ್ ಗದಗದಿಂದ ಗಜೇಂದ್ರಗಡದತ್ತ ಹೊರಟಿತ್ತು. ಈ ವೇಳೆ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ಪರಿಣಾಮ ಟಾಟಾ ಸುಮೋದಲ್ಲಿದ್ದ ಓರ್ವ ಬಾಲಕ ಸೇರಿ ಆರು ಜನ ಮೃತಪಟ್ಟಿದ್ದಾರೆ. ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಬಸ್ನಲ್ಲಿದ್ದ ಕೆಲವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಟಾಟಾ ಸುಮೋ ವಾಹನದಲ್ಲಿ ಒಟ್ಟು 9 ಜನರು ಪ್ರಯಾಣಿಸುತ್ತಿದ್ದರು. ನಿನ್ನೆ ಶ್ರೀಗಳಿಗೆ ಫೋನ್ ಮಾಡಿದ್ದ ಕಲಶೆಟ್ಟಿ ಕುಟುಂಬಸ್ಥರು, ಒಟ್ಟಾಗಿ ಬರುವುದಾಗಿ ತಿಳಿಸಿದ್ದರು. ಆದರೆ, ವಿಧಿಯಾಟ ಹೀಗೆ ಆಟ ಆಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಿಷಯ ತಿಳಿದು ಜಿಮ್ಸ್ ಆಸ್ಪತ್ರೆಗೆ ಧಾವಿಸಿದ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಗಾಯಾಳು, ಮಕ್ಕಳ ಆರೋಗ್ಯ ವಿಚಾರಿಸಿದರು. ಈ ವೇಳೆ, ಮಠದ ಜೊತೆ 25 ವರ್ಷದಿಂದ ಅವಿನಾಭಾವ ಸಂಬಂಧ ಹೊಂದಿದ್ದ ಕುಟುಂಬಸ್ಥರ ಅಗಲಿಕೆ ನೆನೆದು ಶ್ರೀಗಳು ಕಣ್ಣೀರಿಟ್ಟರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಟ್ರಕ್ಗೆ ಹಿಂಬದಿಯಿಂದ ಟೆಂಪೋ ಟ್ರಾವೆಲರ್ ಡಿಕ್ಕಿ.. 12 ಮಂದಿ ಭಕ್ತರ ದುರ್ಮರಣ, 20 ಜನರಿಗೆ ಗಾಯ