ಗದಗ: ತೋಟಗಾರಿಕೆ ಬೆಳೆಯ ಸಹಾಯ ಧನ ಮಂಜೂರು ಮಾಡಲು 14 ಸಾವಿರ ರೂಪಾಯಿಗಳ ಲಂಚ ಪಡೆಯುತ್ತಿರುವಾಗ ತೋಟಗಾರಿಕಾ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗದಗನಲ್ಲಿ ನಡೆದಿದೆ.
ಸುರೇಶ್ ಹನುಮಂತಪ್ಪ ಬಾರಕೇರ ಮುಂಡರಗಿಯ ತೋಟಗಾರಿಕಾ ಇಲಾಖೆ ಕಚೇರಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ. ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದ ಮೈಲಾರಪ್ಪ ಅಲಿಯಾಸ್ ಮುತ್ತಪ್ಪ ಬಸಪ್ಪ ಪರಿಮಳದ ಎಂಬ ರೈತನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.
ಜಂತ್ಲಿ ಗ್ರಾಮ ಹದ್ದಿನಲ್ಲಿರುವ ತಮ್ಮ 4 ಎಕರೆಯಲ್ಲಿ 2.5 ಎಕರೆ ಮತ್ತು ಶಿರೂರ ಗ್ರಾಮ ಹದ್ದಿನಲ್ಲಿರುವ ತಮ್ಮ ಸಹೋದರ ವೆಂಕಟೇಶನ ಒಂದು ಎಕರೆ ಜಮೀನಿನಲ್ಲಿ ಪ್ರೋತ್ಸಾಹ ಧನ ಯೋಜನೆಯಡಿ ಬರುವ ಪಪ್ಪಾಯಿ ಮತ್ತು ನುಗ್ಗೆಕಾಯಿ ಬೆಳೆಯಲು 22 ಮೇ 2019ರಂದು ಅರ್ಜಿ ಹಾಕಿ, ಅನುಮತಿ ಪಡೆದಿದ್ದರು.
ನಂತರ ಮನೆಯವರು ಮತ್ತು ಇತರ ಕೂಲಿಕಾರರ ನೆರವಿನಿಂದ ನರೇಗಾ ಅಡಿ ಗುಂಡಿ ತೋಡುವ, ಗೊಬ್ಬರ ಹಾಕುವ, ಸ್ವಚ್ಛ ಮಾಡುವ ಇತ್ಯಾದಿ ಕೃಷಿ ಚಟುವಟಿಕೆಯನ್ನು ಮಾಡಿದರು. ಬೆಳೆ ಫಸಲಿಗೆ ಬಂದ ನಂತರ ಹೆಕ್ಟೇರ್‌ಗೆ 1 ಲಕ್ಷ 89 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಬೇಕಿದ್ದ ಅಧಿಕಾರಿಗಳು ಈಗಾಗಲೇ 4ರಿಂದ 5ಬಾರಿ ಬಂದು ಪರಿಶೀಲಿಸಿದ ನಂತರವೂ ಪ್ರೋತ್ಸಾಹಧನ, ನರೇಗಾ ಅಡಿ ಮಾಡಿದ ಕಾಮಗಾರಿ ಕೂಲಿ ನೀಡದೇ ಒಂದು ವರ್ಷದಿಂದ ವಿಳಂಬ ಮಾಡುತ್ತಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 7ರಂದು ದೂರುದಾರ ರೈತನ ತೋಟಕ್ಕೆ ಬಂದ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸುರೇಶ ಬಾರಕೇರ, ಈಗಾಗಲೇ ಜಿಪಿಎಸ್ ಮಾಡಿದ್ದು, ಎನ್‌ಎಂಆರ್ ನೀಡಲು 14 ಸಾವಿರ ರೂಪಾಯಿ ಲಂಚ ಕೇಳಿದ್ದಾನೆ. ಈ ಮೊದಲು 6 ಸಾವಿರ ರೂಪಾಯಿ ಲಂಚ ಪಡೆದಿದ್ದನು ಎಂದು ರೈತ ದೂರಿನಲ್ಲಿ ತಿಳಿಸಿದ್ದಾನೆ.
ಸದ್ಯ ಈ ಪ್ರಕರಣ ಸಂಬಂಧ ಎಸಿಬಿ ಪೊಲೀಸರು ಪಿಸಿ ಕಾಯ್ದೆ 1988ರ ಕಲಂ 7(ಎ) ಅಡಿ ಭ್ರಷ್ಟಾಚಾರದ ಪ್ರಕರಣ ದಾಖಲಿಸಿಕೊಂಡಿದ್ದಾರೆ.