ಗದಗ : ವರ್ಷಗಟ್ಟಲೇ ಮನೆಮಂದಿಯೆಲ್ಲಾ ಸೇರಿಕೊಂಡು ಬೆಳೆದಿದ್ದ 6 ಎಕರೆ ಬಾಳೆ ಬೆಳೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಆತ್ಮಹತ್ಯೆಯೊಂದೇ ದಾರಿ ಎಂದು ರೈತ ಕುಟುಂಬವೊಂದು ಕಣ್ಣೀರು ಹಾಕಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ.
ಹಿರೇವಡ್ಡಟ್ಟಿ ಗ್ರಾಮದ ಬಸವಣ್ಣೆಪ್ಪ ಉಪ್ಪಾರ ಮತ್ತು ರೇಣುಕಾ ಉಪ್ಪಾರ ದಂಪತಿ ಬೆಳೆದಿದ್ದ ಸುಮಾರು 6 ಎಕರೆ ಬಾಳೆ ತೋಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣ ಬೆಳೆ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಸರಿ ಸುಮಾರು 30 ಲಕ್ಷ ರೂ. ನಷ್ಟ ಅನುಭವಿಸುವಂತಾಗಿದ್ದು, ಬಾಳೆ ಜೊತೆಗೆ ಡ್ರಿಪ್ ಇರಿಗೇಷನ್ ಪೈಪ್ಗಳೂ ಸಹ ಸುಟ್ಟು ಹೋಗಿವೆ. ಜೊತೆಗೆ ಹೊಲದಲ್ಲಿ ಕೂಡಿ ಹಾಕಿದ್ದ ಗೊಬ್ಬರ ಸಹ ಬೂದಿಯಾಗಿದೆ. ಹಾಗಾಗಿ ಆದಾಯದ ನಿರೀಕ್ಷೆಯಲ್ಲಿದ್ದ ಈ ಕುಟುಂಬಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಈ ದಂಪತಿ ಒಣ ಬೇಸಾಯ ಪದ್ದತಿಯಿಂದ ಬೇಸತ್ತು ಮೂರು ಬೋರ್ವೆಲ್ ಮೂಲಕ ನೀರಾವರಿ ವ್ಯವಸ್ಥೆ ಮಾಡಿ, ಯೂಟ್ಯೂಬ್ ನೋಡಿ ಸಾವಯವ ಕೃಷಿ ಮೂಲಕ ಬಾಳೆ ಬೆಳೆದಿದ್ದರು. ಇದೀಗ ಫಲವತ್ತಾದ ಫಸಲು ಸುಟ್ಟು ಹೋಗಿದ್ದಕ್ಕೆ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದು, ನಮ್ಮ ಬದುಕೇ ಈಗ ಸುಟ್ಟುಹೋಗಿದೆ. ಆತ್ಮಹತ್ಯೆಯೊಂದೇ ದಾರಿ ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನು ಈ ಹೊಲದ ಮೇಲೆ ಸುಮಾರು 8 ಲಕ್ಷ ರೂ. ಸಾಲ ಇದೆ. ಈ ಬಾರಿ ಒಟ್ಟು ಸಾಲವನ್ನು ತೀರಿಸಬೇಕೆಂದುಕೊಂಡಿದ್ದೆ. ಆದರೆ ಬೆಂಕಿ ಬಿದ್ದು ಬಾಳೆ ಬೆಳೆ ಸಂಪೂರ್ಣ ನಾಶವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಅಂತ ರೈತ ಸಹಾಯ ಹಸ್ತ ಬೇಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನೊಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಸೂಕ್ತ ಪರಿಹಾರ ಒದಗಿಸುವ ಕೆಲಸವಾಗಬೇಕಿದೆ.