ಹುಬ್ಬಳ್ಳಿ: ಪೋಷಕರು ನೀಡುವ ಪಾಕೆಟ್ ಮನಿಯನ್ನು ಇಲ್ಲಸಲ್ಲದ ದುರಾಭ್ಯಾಸ, ಮೋಜು-ಮಸ್ತಿಗೆಂದು ವ್ಯಯಮಾಡುವ ಬದಲು ಇಲ್ಲೊಂದು ಯುವಕರ ತಂಡ ತಮ್ಮ ಸಮಾಜಮುಖಿ ಕೆಲಸದಿಂದ ಇತರರಿಗೆ ಮಾದರಿಯಾಗಿದೆ.
ಸ್ಮೈಲ್ ಟೀಮ್ ಎನ್ನುವ ವಿದ್ಯಾರ್ಥಿಗಳ ತಂಡ ತಮ್ಮ ಖರ್ಚಿನ ಹಣವನ್ನು ಸಮಾಜಮುಖಿ ಕಾರ್ಯಕ್ಕೆ ಸದ್ಬಳಕೆ ಮಾಡುತ್ತಿದ್ದು, ಮಹಾನಗರ ವ್ಯಾಪ್ತಿಯ ಬೀದಿ ನಾಯಿಗಳಿಗೆ ಶುಚಿಯಾದ ನೀರು, ಆಹಾರ ದೊರಕಿಸುವ ನಿಸ್ವಾರ್ಥ ಕಾರ್ಯಕ್ಕೆ ಮುಂದಾಗಿದೆ.
ಮಹಾನಗರ ವ್ಯಾಪ್ತಿಯಲ್ಲಿ ಸಾವಿರಾರು ಬೀದಿ ನಾಯಿಗಳಿದ್ದು, ಅವುಗಳಿಗೆ ಹೇಗೋ ಆಹಾರ ದೊರೆಯುತ್ತದೆ. ಆದರೆ, ಬಹುತೇಕ ನಾಯಿಗಳು ಚರಂಡಿ, ಗಟಾರು, ಎಲ್ಲೆಂದರಲ್ಲಿ ಹರಿಯುವ ಕೊಳಚೆ ನೀರನ್ನೇ ಆಶ್ರಯಿಸಿವೆ. ಇಂತಹ ಪ್ರಾಣಿಗಳಿಗೆ ನೀರಿನ ಜೊತೆಗೆ ಒಂದಿಷ್ಟು ಆಹಾರದ ವ್ಯವಸ್ಥೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಯುವಕರು ಸ್ಮೈಲ್ ತಂಡವನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಪ್ರಾರಂಭಿಸಿರುವ ಕಾರ್ಯ ಯಶಸ್ವಿಯಾಗಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಪಡೆದುಕೊಂಡ ಯುವಕರ ತಂಡ, ತೊಟ್ಟಿಗಳಿಗೆ ನೀರು, ಆಹಾರದ ರೂಪದಲ್ಲಿ ಬಿಸ್ಕೆಟ್ಗಳನ್ನು ಹಾಕುತ್ತಿದ್ದಾರೆ. ಇದಕ್ಕಾಗಿ ಆಟೋ ರಿಕ್ಷಾ ಸ್ಟ್ಯಾಂಡ್, ಕೆಲ ಅಂಗಡಿಗಳು, ಫೂಡ್ ಸ್ಟ್ರೀಟ್ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮಹಾನಗರ ವ್ಯಾಪ್ತಿಯಲ್ಲಿರುವ ಶ್ವಾನ ಪ್ರಿಯರನ್ನು ಸಂಪರ್ಕಿಸಿ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿರುವ ಯುವಕರ ತಂಡ, ನೀರು ಹಾಗೂ ಆಹಾರ ನೀಡುವ ಭರವಸೆ ನೀಡಿದ್ದಾರೆ. ನವನಗರದ ಸುನೀಲ ಜನಗಾನಿ, ವಿಜಯ ಬೆಳ್ಳೇರಿಮಠ, ವಿಶ್ವನಾಥ ಸಂಧಿ, ರೇವಣ್ಣಾ ಶಿವಪುರಿ, ಪ್ರಮೋದ ಕಮತರ, ಗಿರೀಶ ನಾಯಕ, ರೋಹಿತ್ ಎನ್ನುವ ವಿದ್ಯಾರ್ಥಿಗಳು ಸ್ಮೈಲ್ ತಂಡದ ಮೂಲಕ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿರುವ ಈ ಸಮಯದಲ್ಲಿ ಪ್ರಾಣಿ-ಪಕ್ಷಿಗಳು ಪರದಾಟ ನಡೆಸಬಾರದು ಎಂಬ ಸದುದ್ದೇಶದಿಂದ ಕುಡಿಯುವ ನೀರು ಹಾಗು ಆಹಾರದ ಪೂರೈಕೆಗೆ ಮುಂದಾಗಿರುವ ಯುವಕರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದುಬಾರೆ ಕ್ಯಾಂಪ್ನಿಂದ ಕಾಡು ಸೇರಿ ವರ್ಷವಾದ್ರೂ ಹಿಂದಿರುಗದ ಕುಶ : ಸಾಕಾನೆಗಾಗಿ ಅರಣ್ಯ ಇಲಾಖೆ ಅಲೆದಾಟ