ಹುಬ್ಬಳ್ಳಿ : ಪುಡಿ ರೌಡಿಗಳ ಗುಂಪೊಂದು ಯುವಕನೋರ್ವನಿಗೆ ಮನಬಂದಂತೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿರುವ ಘಟನೆ ನಗರದ ಇಸ್ಲಾಂಪೂರ ರಸ್ತೆಯ ಮಸೀದಿ ಹತ್ತಿರದ ಸಿದೀಕ್ ಕಿನಾಲ್ ಬಳಿ ನಡೆದಿದೆ. ಘಟನೆಯ ನಂತರ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಖಾದರ ಬಾಷಾ ಔದರಿ (27) ಎಂಬಾತನೇ ಮೃತಪಟ್ಟ ಯುವಕನಾಗಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಉಮರೆಜ್ ಹಾಗೂ ಅವೇಜುಲ್ಲಾ ಎಂಬ ಆರೋಪಿಗಳ ಗುಂಪೊಂದು ಬರ್ಬರವಾಗಿ ಚಾಕು ಇರಿತ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಸೆರೆಗೆ ಬಲೆ ಬೀಸಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಖಾದರಬಾಷಾ ಔದರಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವ್ಯಕ್ತಿಗೆ ಚಾಕು ಇರಿತ, ಕಾರ್ಗ್ಲಾಸ್ ಒಡೆದು ಪುಂಡಾಟ : ಇನ್ನೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕಂಡ ಕಂಡಲ್ಲಿ ಜನರನ್ನು ಅಡ್ಡ ಹಾಕುವ ಕಿರಾತಕರು ಹಲ್ಲೆ ಮಾಡಿ ಉದ್ಧಟತನ ತೋರುತ್ತಿದ್ದಾರೆ. ಇದೇ ರೀತಿ ಹವಾ ಮೆಂಟೇನ್ ಮಾಡಲು ಅಟ್ಟಹಾಸ ಮೆರೆದಿದ್ದ ರೌಡಿಶೀಟರ್ನನ್ನು ಗಿರಿನಗರ ಪೊಲೀಸ್ ಠಾಣೆ ಸಿಬ್ಬಂದಿ (ಏಪ್ರಿಲ್ 27-2023) ಬಂಧಿಸಿದ್ದರು.
ರೌಡಿಶೀಟರ್ ನರಸಿಂಹ ಅಲಿಯಾಸ್ ಕೂಸೆ, ಸಹಚರ ಕಾಂತರಾಜ್ ಬಂಧಿತರು ಎಂಬುದು ತಿಳಿದು ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಯೋಗೇಶ್ ಸೇರಿ ಮೂವರ ವಿರುದ್ಧ ತಲೆಮರೆಸಿಕೊಂಡಿದ್ದು ಶೋಧಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ನರಸಿಂಹ ಏರಿಯಾದಲ್ಲಿ ಹವಾ ಮೇಂಟೆನ್ ಮಾಡಬೇಕು, ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ಕೊಡುವವರಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ್ದ. ಹೀಗಾಗಿ ಏಪ್ರಿಲ್ 25ರ ರಾತ್ರಿ ಗಿರಿ ನಗರದಲ್ಲಿದ್ದ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗ್ತಿದ್ದ ವೆಂಕಟೇಶ್ ಎಂಬಾತನಿಗೆ ಚಾಕು ಇರಿದಿದ್ದ. ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡಾ ಕೊಡಿಸಲಾಗುತ್ತಿದೆ.
ಕಾರ್ ಗ್ಲಾಸ್ಗಳನ್ನು ಒಡೆದು ಪುಡಿ ಪುಡಿ ಮಾಡಿ ಅಟ್ಟಹಾಸ: ಅದೇ ದಿನ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದ ನರಸಿಂಹ, ಕಾಂತರಾಜು ಮತ್ತು ಯೋಗೇಶ್ ಟೀಂ ಕಾರು ಚಾಲಕ ನಿತೀಶ್ ಎಂಬಾತನಿಗೆ ಮನ ಬಂದಂತೆ ಥಳಿಸಿದ್ದರು. ಅಷ್ಟೇ ಅಲ್ಲ ಗಾಂಜಾ ನಶೆಯಲ್ಲಿದ್ದ ಆರೋಪಿಗಳು ರಾಡ್ನಿಂದ ಕಾರ್ ಗ್ಲಾಸ್ಗಳನ್ನು ಒಡೆದು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದರು.
ಈ ಘಟನೆಯ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಮತ್ತು ಐಪಿಸಿ ಸೆಕ್ಷನ್ 324 ಅಡಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಾದ ನರಸಿಂಹ ಮತ್ತು ಕಾಂತರಾಜು ಇಬ್ಬರನ್ನು ಬಂಧಿಸಲಾಗಿದ್ದು, ಯೋಗೇಶ್ ಅಲಿಯಾಸ್ ಯೋಗಿ ಸೇರಿದಂತೆ ಮತ್ತೆ ಮೂವರಿಗಾಗಿ ಬಲೆ ಬೀಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ: ವ್ಯಕ್ತಿಗೆ ಚಾಕು ಇರಿತ, ಕಾರ್ ಗ್ಲಾಸ್ ಒಡೆದು ಪುಂಡಾಟ