ಧಾರವಾಡ: ಪ್ರಧಾನಮಂತ್ರಿಗಳಿಗೆ ಬಹಳ ದೊಡ್ಡ ಪ್ರಮಾಣದ ಭದ್ರತೆ ಇರುತ್ತದೆ. ಅದನ್ನು ಮೀರಿ ಒಬ್ಬ ಬಾಲಕ ಪ್ರಧಾನಿಗೆ ಮಾಲೆ ಹಾಕಲು ಬಂದಿದ್ದ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಆತ ಪ್ರಧಾನಿ ಮೇಲಿನ ಅಭಿಮಾನದಿಂದ, ಪ್ರೀತಿಯಿಂದ ಅಲ್ಲಿಂದ ಬಂದಿದ್ದಾನೆ. ಅದರಿಂದ ದೊಡ್ಡ ಪ್ರಮಾಣದ ಸಮಸ್ಯೆ ಆಗಲ್ಲ. ಅದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆಗೆ ಹುಬ್ಬಳ್ಳಿಗೆ ನಿನ್ನೆ ಆಗಮಿಸಿದ್ದ ಪ್ರಧಾನಿ ರೋಡ್ ಶೋ ವೇಳೆ ಬಾಲಕನೋಬ್ಬ ಹೂಮಾಲೆ ಹಾಕಲು ಬಂದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದರು. ಇಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜೋಶಿ, ವಿವಿಧ ರೀತಿಯ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಇವತ್ತು ರಾಜ್ಯಪಾಲರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಅಕ್ಕಿ ಹಾಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಅಕ್ಕಿಯನ್ನು ಉಚಿತವಾಗಿ ನಾವು ಈಗಾಗಲೇ ಕೊಡುತ್ತಿದ್ದೇವೆ. ಅದಕ್ಕಾಗಿ ಬೇಕಾದಷ್ಚು ದಾಸ್ತಾನಿದೆ. ಕಾಂಗ್ರೆಸ್ನವರು ಯೋಜನೆ ರೂಪಿಸಿ ಹೋಗಿದ್ರು, ನಾವು ಅದನ್ನು ಕೊಡುತ್ತಿದ್ದೇವೆ. ಕಾಂಗ್ರೆಸ್ ಒಂದು ಬೇಜವ್ದಾರಿಯುತ ಪಾರ್ಟಿ. ಯಾವುದು ಅಸಾಧ್ಯವೋ ಅದನ್ನೇ ಹೇಳುತ್ತದೆ. ಸುಳ್ಳು ಹೇಳೋದು ಅವರ ಸ್ವಭಾವದಲ್ಲೇ ಇದೆ. ನನ್ನ ಮಾಹಿತಿ ಪ್ರಕಾರ, 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಬೇಕಾದರೆ ವಾರ್ಷಿಕ 23 ಸಾವಿರ ಕೋಟಿ ರೂ ಬೇಕು. ಜನ ಬಯಸೋದು ಕ್ವಾಲಿಟಿ ಮತ್ತು 24 ಗಂಟೆಯ ವಿದ್ಯುತ್. ವಿದ್ಯುತ್ ಉಚಿತ ಕೊಡಿ ಎಂದು ಜನ ಬಯಸುವುದಿಲ್ಲ ಎಂದು ಹೇಳಿದರು.
ಉತ್ತಮ ವಿದ್ಯುತ್ ಬೇಕು ಎನ್ನುವುದು ಜನರ ಬಯಕೆ. ಕಾಂಗ್ರೆಸ್ ಕಾಲದಲ್ಲಿ ಏನೂ ಮಾಡಿಲ್ಲ, ಮೋದಿ ಕಾಲದಲ್ಲಿ ದೇಶದಲ್ಲೆಲ್ಲ ವಿದ್ಯುತ್ ನೀಡಲಾಗುತ್ತಿದೆ. ಹಾಗಾಗಿ, ಕ್ವಾಲಿಟಿ ಮಟ್ಟದಲ್ಲಿ ನಿಗದಿತ ದರದಲ್ಲಿ ವಿದ್ಯುತ್ ನೀಡುವುದು ಜನರ ಆದ್ಯತೆ ಆಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯಿಂದ ಸಿರಿಧಾನ್ಯ, ಸಾವಯವ ಮೇಳ: ಯುವಜನೋತ್ಸವ ಪ್ರಯುಕ್ತ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸಿರಿಧಾನ್ಯ ಜಾಗೃತಿ ಕಾರ್ಯಕ್ರಮ- ಮ್ಯಾರಥಾನ್ ಧಾರವಾಡದ ಕಲಾಭವನದಿಂದ ಹೊರಟು ಕೋರ್ಟ್ ಸರ್ಕಲ್ ಮುಖಾಂತರ ಜಿಲ್ಲಾಧಿಕಾರಿ ಕಛೇರಿ ಆವರಣ, ಆಲೂರು ವೆಂಕಟರಾವ್ ಭವನ, ಕರ್ನಾಟಕ ಕಾಲೇಜು ದಾರಿಯಲ್ಲಿ ಸಾಗಿ ಅಂತಿಮವಾಗಿ ಆರ್.ಎನ್. ಶೆಟ್ಟಿ ಕ್ರಿಡಾಂಗಣದಲ್ಲಿ ಕೊನೆಗೊಂಡಿತು. ಜಾಗೃತಿ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ, ಗ್ರೀನ್ ಪೌಂಡೇಶನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದವು. ಪ್ರತಿನಿಧಿಗಳು ಕೈಯಲ್ಲಿ ಪ್ರಚಾರ ಫಲಕಗಳನ್ನು ಹಿಡಿದು ಸಿರಿಧಾನ್ಯ ಬಳಕೆ ಮತ್ತು ಆರೋಗ್ಯ ರಕ್ಷಣೆ ಕುರಿತಂತೆ ಘೋಷಣೆ ಕೂಗಿದರು.
ಇದೇ ಕಾರ್ಯಕ್ರಮದ ನಿಮಿತ್ತ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಹಾಕಲಾಗಿದೆ. ಈ ಮಳಿಗೆಗಳಲ್ಲಿ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು, ವಿವಿಧ ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು ಮಾದರಿ ಹಾಗೂ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಕೃಷಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಪ್ರಚಾರ ಹಾಗೂ ಸ್ಥಳದಲ್ಲಿ ಆನ್ಲೈನ್ ಸೇವೆ ನೀಡಲು ಮಳಿಗೆ ತೆರೆಯಲಾಗಿದೆ. ರೈತ ಉತ್ಪಾದಕ ಕಂಪನಿಗಳು, ಸ್ವ ಸಹಾಯ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳು, ಸಾವಯವ ಒಕ್ಕೂಟ, ಖಾಸಗಿ ಕಂಪನಿಗಳು, ಆತ್ಮನಿರ್ಭರ ಭಾರತ ಫಲಾನುಭವಿಗಳು, ಉದ್ದಿಮೆದಾರರು ವಿವಿಧ ಸಾಮಗ್ರಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.
ರೊಟ್ಟಿ, ಚಟ್ನಿ, ಉಪ್ಪಿನಕಾಯಿ, ಸಿಹಿ ತಿನಿಸುಗಳು, ಮಾದಲಿ, ಸಿರಿದಾನ್ಯ ಉತ್ಪನ್ನಗಳು, ಶುದ್ಧ ಗಾಣದ ಎಣ್ಣೆ, ಸಾವಯವ ಸಂಸ್ಕರಿತ ಆಹಾರ ಉತ್ಪನ್ನಗಳು, ಸಾವಯವ ಸಂಸ್ಕರಿತ ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ. ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಆಹಾರ ಮೇಳ, ಸಿರಿಧಾನ್ಯ ಮೇಳ, ಯುವಕೃತಿ ಮೇಳಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ಬಳಿಕ ಸೃಜನಾ ರಂಗಮಂದಿರದಲ್ಲಿ ಜಾನಪದ ನೃತ್ಯ ಸೇರಿದಂತೆ ವಿವಿದ ಕಾರ್ಯಕ್ರಮಗಳಿಗೆ ರಾಜ್ಯಪಾಲರು ಸೇರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ.. ರೋಡ್ ಶೋ ನಡೆಸುತ್ತಿರುವ ಪ್ರಧಾನಿ