ಹುಬ್ಬಳ್ಳಿ: ಬಿಜೆಪಿಯಲ್ಲಿ ಯಾರು ಬಾಯಿಗೆ ಬಂದ ಹಾಗೆ ಮಾತನಾಡುವರೋ ಅವರೇ ಸಚಿವರಾಗುತ್ತಾರೆ. ನನಗೂ ಬೈದವರು ಮಂತ್ರಿಯಾಗಿದ್ದಾರೆ. ಅವರೇ ಪಕ್ಷದ ಸಿದ್ಧಾಂತ ಹೇಳುತ್ತಿದ್ದಾರೆ. ಇದರಲ್ಲಿ ರಾಜಕೀಯ ಇದೆ ಎಂದು ಬಿಜೆಪಿ ಶಾಸಕ ಬಸನಗೌಡಪಾಟೀಲ ಯತ್ನಾಳ ತಮ್ಮ ಪಕ್ಷದವರ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರಿಗೆ ಬಿಜೆಪಿಯಿಂದಲೇ ಟಿಕೆಟ್ ನೀಡಬೇಕು. ಇದು ಬಿಜೆಪಿಯ ರಾಜ ಧರ್ಮವಾಗಿದ್ದು, ಅನರ್ಹರ ಗೆಲುವಿಗೆ ನಾವೆಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಬೇಕೆಂದು ಹೇಳಿದರು.
ಬಿಜೆಪಿಯಲ್ಲಿ ಅನರ್ಹ ಶಾಸಕರ ಕುರಿತು ವಿರೋಧ ಇದೆ. ಅವರ ಭವಿಷ್ಯದ ದೃಷ್ಟಿಯಿಂದ ಟಿಕೆಟ್ ನೀಡಬೇಕು. ಅಲ್ಲದೇ ಬಿಜೆಪಿ ಅನರ್ಹ ಶಾಸಕರ ಗೆಲುವಿಗೆ ಪ್ರಯತ್ನ ಮಾಡುವುದು ನಮ್ಮ ಧರ್ಮ. ನಾನು ಸಚಿವನಾಗುತ್ತೇನೆ ಎಂದು ಯಾರ ಮುಂದೆಯೂ ಹೇಳಿಲ್ಲ. ಆದರೆ ನನಗೂ ಒಳ್ಳೆಯ ಕಾಲ ಬರುತ್ತೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಮೇಲೆ ಪ್ರೀತಿ ಹೆಚ್ಚಾಗಿದೆ. ಕೆಲವು ಸಾರಿ ಅವರಿಗೆ ದ್ವೇಷ ಕೂಡಾ ಹೆಚ್ಚಾಗುತ್ತದೆ. ರಾಜಕಾರಣದಲ್ಲಿ ಕಾಲಕ್ಕೆ ತಕ್ಕಂತೆ ವೈರಿಯು ಕೂಡ ಗೆಳೆಯನಾಗುತ್ತಾನೆ. ಇದೀಗ ಕುಮಾರಸ್ವಾಮಿ ಅವರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದು, ಅವರಿಗೆ ನನ್ನ ಕಡೆಯಿಂದ ಅಭಿನಂದನೆ ಎಂದರು.