ಹುಬ್ಬಳ್ಳಿ: ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ನಾಲ್ಕು ಜನ ಸಂಸದರಿಗೆ ಹಣ ಕೊಟ್ಟಿದ್ದೇವೆ. ಆದರೆ ಹಣ ಪಡೆದುಕೊಂಡಿರುವವರು ಯಾವುದೇ ಕಾರ್ಯವನ್ನು ಮಾಡಿಲ್ಲ. ಅಲ್ಲದೇ ತಮ್ಮ ವೈಯಕ್ತಿಕ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಮಹದಾಯಿ ಹೋರಾಟಗಾರ ವೀರೇಶ ಸೊರಬದಮಠ ಆರೋಪಿಸಿದ್ರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಈ ಭಾಗದ ಸಂಸದರಾದ ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ, ಶಿವಕುಮಾರ್ ಉದಾಸಿ, ಪಿ.ಸಿ. ಗದ್ದಿಗೌಡರ ಅವರಿಗೆ ತಲಾ ಐದು ಸಾವಿರ ಹಣವನ್ನು ನೀಡಿದ್ದೇವೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ 10 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಆದರೇ ಪಿ.ಸಿ. ಗದ್ದಿಗೌಡರ ಮಾತ್ರ ಹಣ ಮರಳಿಸಿದ್ದಾರೆ. ಉಳಿದ ಸಂಸದರು ಮರಳಿಸಿಲ್ಲ ಅವರು ವೈಯಕ್ತಿಕವಾಗಿ ಬಳಕೆ ಮಾಡಿಕೊಂಡು ಮಹದಾಯಿ ನೋಟಿಫಿಕೇಶನ್ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಹೋರಾಟಗಳನ್ನು ಮಾಡಲಾಗಿದ್ದು, ಆದರೆ ಹೋರಾಟವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ಹಾಕಲಾಗಿದ್ದು, ಇದೇ 28 ಅಥವಾ ಮಾರ್ಚ್ 2ರ ಒಳಗಾಗಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್‌ನಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಹಣದ ಅವಶ್ಯಕತೆ ಇದ್ದು, ಯಾರಾದರೂ ದಾನಿಗಳು ಆರ್ಥಿಕ ಸಹಾಯ ಮಾಡಲು ಮುಂದಾದರೆ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಅವರು ವಿನಂತಿಸಿಕೊಂಡರು. ಅಲ್ಲದೆ ಹೆಚ್ಚಿನ ಹಣದ ಅವಶ್ಯಕತೆ ಬಿದ್ದರೆ ರೈತರು ತಾವು ಬೆಳೆದಿರುವ ಬೆಳೆಯನ್ನು ಮಾರಿ ಹೋರಾಟಕ್ಕೆ ಹಣ ಹಾಕಲಾಗುವುದು ಎಂದು ಅವರು ಹೇಳಿದರು.