ಹುಬ್ಬಳ್ಳಿ: ರಾಜ್ಯದ ಅಲ್ಲಲ್ಲಿ ಮಳೆ ಆರಂಭವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ವರುಣ ಕೃಪೆ ತೋರಿದ್ದಾನೆ. ಆದರೆ ನಗರದ ದಾಜೀಬಾನ್ ಪೇಟೆಯ ಗೌಳಿ ಗಲ್ಲಿಯ ನಿವಾಸಿಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರು ಪೂರೈಕೆಯಾಗದಿರುವದನ್ನು ಖಂಡಿಸಿ ದಾಜೀಬಾನ್ ಪೇಟೆಯ ರಸ್ತೆ ತಡೆದು ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಪಾಲಿಕೆ ಅಧಿಕಾರಿಗಳಿಗೆ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ನೀರು ಬಿಡುವಂತೆ ಮನವಿ ಮಾಡಲಾಗಿದೆ. ಆದರೂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ನೀರು ಪೂರೈಕೆ ಮಾಡುವಂತೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವುದನ್ನು ಅರಿತ ಮಹಾನಗರ ಪಾಲಿಕೆ ಮಾಜಿ ಮೇಯರ್ ಡಿ ಕೆ ಚೌಹಾಣ್ ಹಾಗೂ ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು. ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಜನ ಪ್ರತಿಭಟನೆ ಹಿಂಪಡೆದರು. ಮುಂದೆ ಈ ರೀತಿಯಾದ್ರೆ ಜಲಮಂಡಳಿ ಹಾಗೂ ಪಾಲಿಕೆಗೆ ಮುತ್ತಿಗೆ ಹಾಕುವುದಾಗಿ ಜನ ಎಚ್ಚರಿಕೆ ನೀಡಿದರು.