ಹುಬ್ಬಳ್ಳಿ : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಜರುಗಿದ ಚುನಾವಣೆಗೆ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನಲ್ಲಿ ಉತ್ಸಾಹದ ಮತದಾನ ಜರುಗಿತು. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಲಾಗಿತ್ತು. ವೈದ್ಯಕೀಯ ಸಿಬ್ಬಂದಿ ಮತದಾರರ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಹ್ಯಾಂಡ್ ಸ್ಯಾನಿಟೈಸರ್ ನೀಡಿ ಮತಗಟ್ಟೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಮಾಸ್ಕ್ ಧರಿಸಿದ ಮತದಾರರು ಸಾಮಾಜಿಕ ಅಂತರದೊಂದಿಗೆ ಮತಗಟ್ಟೆಗೆ ತೆರಳಿ ಮತದಾನ ಹಕ್ಕು ಚಲಾಯಿಸಿದರು.
ಹುಬ್ಬಳ್ಳಿ ಮಿನಿವಿಧಾನ ಸೌಧದಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 45 ರಲ್ಲಿ ಶಿರಗುಪ್ಪಿ ಸರ್ಕಲ್ ಹಾಗೂ 46 ರಲ್ಲಿ ಛಬ್ಬಿ ಸರ್ಕಲ್‌ನ ಗ್ರಾಮದ ಪದವೀಧರ ಮತದಾರರು ಮಂಜಾನೆ 8 ಗಂಟೆಯಿಂದಲೇ ಆಗಮಿಸಿ ಮತ ಚಲಾಯಿಸಿದರು.
ಕುಂದಗೋಳ ಮಿನಿವಿಧಾನ ಸೌಧದಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 48 ಹಾಗೂ 49 ರಲ್ಲಿ ಕುಂದಗೋಳ ಸರ್ಕಲ್ ಗ್ರಾಮದ ಪದವೀಧರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸಾಹದಿಂದ ಮತದಾನ ಮಾಡಿದರು.
ಮತ ಚಲಾಯಿಸಿದ ಕೋವಿಡ್ ಸೋಂಕಿತರು..
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ಗಂಟೆ ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಮೀಸಲಿಡಲಾಗಿತ್ತು.
ಅಣ್ಣಿಗೇರಿ ಪುರಸಭೆಯ ಮತಗಟ್ಟೆ ಸಂಖ್ಯೆ 50 ರಲ್ಲಿ ಇಬ್ಬರು ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಕೋವಿಡ್ ನಿಯಂತ್ರಣದ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಮತ ಚಲಾಯಿಸಿದರು.
ಹೋಂ ಐಸೋಲೇಷನ್ ನಲ್ಲಿದ್ದ ಓರ್ವರು ಹಾಗೂ ಕೋವಿಡ್ ಕೇರ್ ಸೆಂಟರಿನಲ್ಲಿ ಇದ್ದ ಓರ್ವರು ಮತದಾನ ಮಾಡಿದರು. ಇವರು ಮತಗಟ್ಟೆಗೆ ಬಂದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮತದಾನದ ನಂತರ ಮತಗಟ್ಟೆಯನ್ನು ಪುನಃ ಸಂಪೂರ್ಣ ಸ್ಯಾನಿಟೈಸ್ ಮಾಡಲಾಯಿತು ಎಂದು ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್. ಎಂ.ಹೊನಕೇರಿ ತಿಳಿಸಿದರು.