ಧಾರವಾಡ : ಡಾ. ವಿಷ್ಣುವರ್ಧನ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಇಬ್ಬರು ಕೈದಿಗಳ ದಂಡದ ಹಣ ತುಂಬಿ ಮಾನವೀಯ ಕೆಲಸ ಮಾಡಿದ್ದಾರೆ. ವಿಷ್ಣು ಸೇನಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ದಂಡದ ಹಣ ತಲಾ 10 ಸಾವಿರ ರೂ. ಪಾವತಿ ಮಾಡಿ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದಾರೆ.
ಮಹಾದೇವಪ್ಪ ಉದಗಟ್ಟಿ ಮತ್ತು ವಾಸು ಕಾಟೀಗರ ಬಿಡುಗಡೆಗೊಂಡ ಕೈದಿಗಳಾಗಿದ್ದಾರೆ. ಶಿಕ್ಷೆ ಅವಧಿ ಮುಗಿದರೂ ದಂಡ ತುಂಬಲು ಹಣವಿಲ್ಲದೇ ಇಬ್ಬರು ಜೈಲಿನಲ್ಲಿದ್ದರು. ನವಲಗುಂದ ತಾಲೂಕಿನ ಗುಡಿಸಾಗರ ಮೂಲದ ಮಹಾದೇವಪ್ಪ 6 ವರ್ಷ ಜೈಲು ಶಿಕ್ಷೆಗೊಳಗಾಗಿದ್ದರು. ಹುಬ್ಬಳ್ಳಿಯ ವಾಸು ಕಾಟೀಗರ 7 ವರ್ಷ ಜೈಲು ಶಿಕ್ಷೆ ಪೂರ್ಣಗೊಳಿಸಿದ್ದಾರೆ.
ದಂಡದ ಹಣ ತುಂಬುವ ಮೂಲಕ ಧಾರವಾಡ ಕೇಂದ್ರ ಕಾರಾಗೃಹದಿಂದ ಇಬ್ಬರನ್ನೂ ವಿಷ್ಣುಸೇನಾ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ ನೇತೃತ್ವದಲ್ಲಿ ಬಿಡುಗಡೆ ಮಾಡಿಸಲಾಗಿದೆ. ಬಿಡುಗಡೆಗೊಂಡ ಕೈದಿಗಳು ಕಂಬಿಯಿಂದ ಹೊರಬರುತ್ತಿದ್ದಂತೆ ನಗುಮುಖದಿಂದ ತಮ್ಮ ಮನೆಗಳತ್ತ ಹೊರಟರು. ಇದಕ್ಕೂ ಮುನ್ನ ಡಾ.ವಿಷ್ಣುವರ್ಧನ್ ಮತ್ತು ಅವರ ಅಭಿಮಾನಿಗಳ ಸಮಿತಿಗೆ ಕೃತಜ್ಞತೆ ತಿಳಿಸಿದರು.