ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿಯಿದೆ. ಆದರೆ ಕಲಘಟಗಿ ಕ್ಷೇತ್ರದಲ್ಲಿ ಮಾತ್ರ ಸದ್ದಿಲ್ಲದೇ ಚುನಾವಣೆ ತಯಾರಿ ನಡೆದಿದೆ. ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಇದೀಗ ಗ್ರಾಮ ವಾಸ್ತವ್ಯಕ್ಕೆ ಮೊರೆ ಹೋಗಿದ್ದು ರಾಜಕೀಯವಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.
ಮತದಾರರ ಕಷ್ಟ-ಸುಖ ಅರಿಯಲು ವಾರಕ್ಕೆರಡು ದಿನ ಗ್ರಾಮ ವಾಸ್ತವ್ಯ ನಡೆಸುವುದಾಗಿ ಘೋಷಿಸಿಕೊಂಡಿದ್ದ ಅವರು, ಗುರುವಾರ ತಾವರಗೇರಿಯಲ್ಲಿ ವಾಸ್ತವ್ಯ ಮಾಡುವ ಮೂಲಕ ಜನತೆಯ ಕಷ್ಟ-ಸುಖಕ್ಕೆ ಕಿವಿಯಾಗಿದ್ದು, ಈ ಮೂಲಕ ಸಂತೋಷ ಲಾಡ್ ಗೆ ಶಾಕ್ ನೀಡಿದ್ದಾರೆ.
ನಾಗರಾಜ್ ಛಬ್ಬಿ ಅವರಿಗೆ ಕಲಘಟಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಈ ಬಾರಿ ಹೇಗಾದ್ರು ಮಾಡಿ ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದಾರೆ. 2008ರಲ್ಲಿ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿ ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಬಳ್ಳಾರಿ ಜಿಲ್ಲೆಯ ಗಣಿಧಣಿ ಸಂತೋಷ ಲಾಡ್‌ಗೆ ಟಿಕೆಟ್ ಕೊಟ್ಟಿತ್ತು. ನಿರೀಕ್ಷೆಯಂತೆ ಲಾಡ್ ಆಗ ಗೆಲುವು ಸಾಧಿಸಿದ್ದರು. ಮುಂದೆ 2013ರಲ್ಲೂ ಲಾಡ್ ಗೆದ್ದಿದ್ದರು. ಅಲ್ಲದೇ, ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಆದರೆ 2018ರಲ್ಲಿ ಬಿಜೆಪಿಯ ಸಿ.ಎಂ. ನಿಂಬಣ್ಣವರ ಎದುರಿಗೆ ಪರಾಭವಗೊಡರು.
ಸೋತ ನಂತರ ಕ್ಷೇತ್ರದ ಕಡೆ ಅಷ್ಟಾಗಿ ಬಂದಿಲ್ಲ. ಹೀಗಾಗಿ ಸಂತೋಷ ಮತ್ತೆ ಈ ಕ್ಷೇತ್ರದತ್ತ ಮುಖ ಮಾಡಿಲ್ಲ. ಇದರಿಂದ ಸಹಜವಾಗಿ ನಾಗರಾಜ ಛಬ್ಬಿ ಸಕ್ರಿಯವಾಗಿ ಕ್ಷೇತ್ರದಲ್ಲಿ ಓಡಾಡುತ್ತಾ ಪಕ್ಷ ಸಂಘಟನೆ ಮಾಡಲು ಶುರು ಮಾಡಿದ್ದಾರೆ. ಇದರಿಂದ ಅತ್ತ ಹೈಕಮಾಂಡ್ ಹಾಗೂ ಇತ್ತ ಕ್ಷೇತ್ರದ ಜನತೆಗೆ ಹತ್ತಿರವಾಗತೊಡಗಿದ್ದಾರೆ.
‘ಲಾಡ್ ನಾಪತ್ತೆ’ ಎಂದೆಲ್ಲ ಕಾರ್ಯಕರ್ತರು, ಜನತೆ ಮಾತನಾಡಿಕೊಳ್ಳಲು ಶುರು ಮಾಡಿತು. ಇದರಿಂದ ಎಚ್ಚೆತ್ತ ಲಾಡ್ ಕಳೆದ ತಿಂಗಳು ಕ್ಷೇತ್ರದಲ್ಲಿ ದಿಢೀರನೆ ಪ್ರತ್ಯಕ್ಷರಾಗಿ ಮುಂದಿನ ಚುನಾವಣೆಯಲ್ಲೂ ನಾನೇ ಕಣಕ್ಕಿಳಿಯುತ್ತೇನೆ ಎಂಬ ಸಂದೇಶ ನೀಡಿದ್ದಾರೆ. ಆದ್ರೆ ಈಗ ನಾಗರಾಜ್ ಛಬ್ಬಿ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮ ವಾಸ್ತವ್ಯ ಮಾಡುತ್ತಿರುವದು ಕಲಘಟಗಿ ರಾಜಕೀಯದಲ್ಲಿ ತೀವ್ರ ಚರ್ಚೆಯನ್ನುಂಟು ಮಾಡಿದ್ದು, ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲ ಮೂಡಿಸಿದೆ.