ಹುಬ್ಬಳ್ಳಿ : ಕೊರೊನಾದಿಂದ ಸಾವನ್ನಪ್ಪಿದವರ ಮೃತದೇಹವನ್ನು ವಿದ್ಯಾನಗರದ ಸ್ಮಶಾನದಲ್ಲಿ ಸುಡಲಾಗುತ್ತದೆ. ಇದರಿಂದ ಇಲ್ಲಿನ ಅಪಾರ್ಟ್ಮೆಂಟ್‌ನಲ್ಲಿರುವ ಜನರು ಆತಂಕಗೊಂಡಿದ್ದಾರೆ.
ಮೃತ ದೇಹಗಳನ್ನು ಸುಡುವುದರಿಂದ ಅದರಲ್ಲಿ ಬರುವ ಹೊಗೆ ಹಾಗೂ ದುರ್ವಾಸನೆಯಿಂದ ಇಲ್ಲಿನ ಜನರು ಮತ್ತಷ್ಟು ಹೈರಾಣಾಗಿದ್ದಾರೆ. ಹೊಗೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಕೂಡ ಬೀರುತ್ತಿದೆ. ಹೀಗಾಗಿ, ಕೋವಿಡ್ ಮೃತ ದೇಹದ ಅಂತ್ಯಕ್ರಿಯೆ ಬೇರೆ ಕಡೆಗೆ ಸ್ಥಳಾಂತರ ಮಾಡುವಂತೆ ಜನರು ಒತ್ತಾಯಿಸಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಬಹುತೇಕ ಮೃತ ದೇಹಗಳನ್ನು ಇಲ್ಲಿಯೇ ಸುಡಲಾಗುತ್ತಿದೆ. ಈ ಹಿನ್ನೆಲೆ ಹಗಲು ಮತ್ತು ರಾತ್ರಿಯೂ ಕೂಡ ಇಲ್ಲಿನ ಜನರು ಹೊಗೆ ಹಾಗೂ ದುರ್ವಾಸನೆಯಿಂದ ಎಲ್ಲಿ ನಮಗೂ ಕೊರೊನಾ ವಕ್ಕರಿಸುತ್ತದೆಯೋ ಎಂಬುವ ಆತಂಕದಲ್ಲಿದ್ದಾರೆ.
ಅಲ್ಲದೆ ಜಿಲ್ಲಾಡಳಿತ ಈಗಾಗಲೇ ಹೆಗ್ಗೇರಿಯ ಸ್ಮಶಾನದಲ್ಲಿ ವ್ಯವಸ್ಥೆ ಮಾಡಿದ್ದರೂ ಕೂಡ ಕೋವಿಡ್ ಮೃತದೇಹವನ್ನು ಹೆಚ್ಚಾಗಿ ವಿದ್ಯಾನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವುದರಿಂದ ಜನರು ಮತ್ತಷ್ಟು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಂಡು ಜನರ ಹಿತಾಸಕ್ತಿ ಕಾಪಾಡಬೇಕಿದೆ.