ಧಾರವಾಡ : ನನ್ನ ಬೆಂಬಲಿಗರ ಮೇಲೆ ಜೂನ್ 12ರಂದು ಸಿಬಿಐ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಪ್ರವಾಸಿ ಮಂದಿರದಲ್ಲಿದ್ದಾಗ ಮಧ್ಯರಾತ್ರಿ ಕೋಣೆಗೆ ಕರೆದು ಬಾಲಾಜಿ ಹಾಗೂ ಚಾಲಕ ಗಂಗಾಧರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು. ಸೆಕ್ಯೂರಿಟಿ ಕೊರತೆಯ ಹಿನ್ನೆಲೆ ಇಂತಹ ಘಟನೆ ನಡೆದಿದೆ. ಯಾರು ಬಂದು ಏನಾದರೂ ಮಾಡಬಹುದಾ.. ಸಿಬಿಐ ಅಧಿಕಾರಿಗಳು ದೊಡ್ಡವರಾ? ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು. ಈ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದೇವೆ ಎಂದರು.
ಈ ಕುರಿತು ವಾಟಾಳ್ ಆಪ್ತ ಬಾಲಾಜಿ ಕೂಡ ಮಾತನಾಡಿದ್ದು, ನಾನು ಊಟ ಮಾಡಿ ಕಾರಿಡಾರ್ನಲ್ಲಿದ್ದೆ. ಅಧಿಕಾರಿಯೊಬ್ಬರು ಕುಡಿದ ಅಮಲಿನಲ್ಲಿದ್ದರು. ನಾವು ವಾಟಾಳ್ ಕಡೆಯವರು ಎಂದ ಕೂಡಲೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಮತ್ತೊಬ್ಬ ಅಧಿಕಾರಿ ಅಲ್ಲಿಗೆ ಬಂದು ನಮ್ಮನ್ನು ಹೊರಗೆ ಕಳಿಸಿದರು. ಪ್ರಕರಣವೊಂದರ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ನಗರದ ಪ್ರವಾಸಿ ಮಂದಿರದಲ್ಲಿ ಬೀಡು ಬಿಟ್ಟಿದ್ದಾರೆ. ವಾಟಾಳ್ ಅವರು ಅಲ್ಲಿಗೆ ಬಂದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.