ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಅನಾಥ ವಯೋವೃದ್ಧನನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಹುಬ್ಬಳ್ಳಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ವ್ಯಕ್ತಿಯನ್ನು ಉಪನಗರ ಪೊಲೀಸ್ ಠಾಣೆಯ ಎಎಸ್ಐ ವಿರುಪಾಕ್ಷಪ್ಪ ರಾಯಾಪೂರ, ಹೆಡ್ ಕಾನ್ಸ್ಟೇಬಲ್ ಬಸವರಾಜ ಸುಣಗಾರ ಹಾಗೂ ಫಕ್ಕಿರೇಶ ಗೊಬ್ಬರಗುಂಪಿ ಅವರು ಸ್ಥಳದಲ್ಲಿದ್ದ ಸಾರ್ವಜನಿಕರ ನೆರವಿನಿಂದ ಆ್ಯಂಬುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ವ್ಯಕ್ತಿಯ ಹತ್ತಿರಕ್ಕೂ ಬರಲು ಹಿಂದೆ ಮುಂದೆ ನೋಡುವ ಪರಿಸ್ಥಿತಿಯಲ್ಲಿ, ಹೆಡ್ ಕಾನ್ಸ್ಟೇಬಲ್ ಬಸವರಾಜ ಸುಣಗಾರ ಅವರು ಅನಾರೋಗ್ಯಪೀಡಿತ ವ್ಯಕ್ತಿಯ ಹತ್ತಿರಕ್ಕೆ ಹೋಗಿ, ಆರೋಗ್ಯ ಸ್ಥಿತಿ ತಿಳಿದು ಚಿಕಿತ್ಸೆಗೆ ನೆರವಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದಲ್ಲದೆ ಇತರರಿಗೂ ಮಾದರಿಯಾಗಿದ್ದಾರೆ.