ಧಾರವಾಡ: ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಲೋಕಾರ್ಪಣೆಗೊಳಿಸಲು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಐಐಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮಾರ್ಚ್ 12ರಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಐಐಟಿ ಉದ್ಘಾಟಿಸುವರು. ಇದಾದ ನಂತರ ಶಾಸಕ ಮುನೇನಕೊಪ್ಪ ಕ್ಷೇತ್ರದಲ್ಲಿ ತುಪ್ಪರಿ ಹಳ್ಳದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಹುಬ್ಬಳ್ಳಿಯ ಉದ್ದನೆಯ ರೈಲು ಪ್ಲಾಟ್ ಫಾರ್ಮ್ ಲೋಕಾರ್ಪಣೆ, ಕಿಮ್ಸ್ ನೂತನ ಹಾಸ್ಟೆಲ್ ಉದ್ಘಾಟನೆ ಹಾಗು ಹರ್ ಘರ್ ನಳ್ ಯೋಜನೆಯ ಶಂಕು ಸ್ಥಾಪನೆ ಕಾರ್ಯ ನೆರವೇರಿಸಲಿದ್ದಾರೆ" ಎಂದು ಮಾಹಿತಿ ನೀಡಿದರು.
"ಈ ವರ್ಷ ವಿಶ್ವ ಸಿರಿಧಾನ್ಯ ಆಚರಣೆ ಇದೆ. ಹೀಗಾಗಿ, ಸಿರಿಧಾನ್ಯಗಳ ಮೂಲಕ ಪ್ರಧಾನಿ ಮೋದಿ ಅವರನ್ನು ಸ್ವಾಗತ ಮಾಡುತ್ತೇವೆ. ಸ್ಥಳೀಯ ಕಲಾವಿದರು ಮೋದಿ ಅವರಿಗೆ ವಿಭಿನ್ನ ಸ್ವಾಗತ ಕೋರಲಿದ್ದಾರೆ. ಧಾರವಾಡ ಜಿಲ್ಲೆಯಿಂದಲೇ ಒಂದರಿಂದ 2 ಲಕ್ಷ ಜನ ಬರಲಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಪ್ರಭಾವ ಇದು" ಎಂದರು.
ನಮ್ಮ ಕಾಲದ ಐಐಟಿಯನ್ನು ಈಗ ಮೋದಿ ಉದ್ಘಾಟಿಸುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, "ಮೈಸೂರು-ಬೆಂಗಳೂರು ರಸ್ತೆ ಬಗ್ಗೆಯೂ ಹಾಗೆಯೇ ಹೇಳಿದ್ದಾರೆ. ಅವರು ತಮ್ಮ ಅವಧಿಯಲ್ಲಿ ಏನೂ ಮಾಡಲಿಲ್ಲ. ನಾವು ಮಾಡಿಲ್ಲದ ಕಾರಣ ನಿಮಗೆ ಮಾಡಲು ಸಿಗುತ್ತಿದೆ ಎಂಬಂತೆ ಅವರ ವಾದವಿದೆ. ನಾನು ಪ್ರತಿಪಕ್ಷ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಅವರು 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ, ಆದರೂ ಐಐಟಿ ರಾಯಚೂರು ಎಂದು ಹೇಳಿ ಗೊಂದಲ ಉಂಟುಮಾಡಿದ್ರು. ಆರ್.ವಿ.ದೇಶಪಾಂಡೆ ಸಚಿವರಿದ್ದಾಗ ಇಲ್ಲಿ ಐಐಟಿಗೆ ಜಾಗ ಒದಗಿಸಿ ಕೊಟ್ಟರು. ಬಳಿಕ ಐಐಟಿ ಕಟ್ಟಡ ಆರಂಭಿಸುವ ಕೆಲಸ ಪ್ರಾರಂಭವಾಯಿತು" ಎಂದು ತಿಳಿಸಿದರು.
"ಸಿದ್ದರಾಮಯ್ಯನವರು ರಾಹುಲ್ ಗಾಂಧಿ ರೀತಿ ಮಾತನಾಡಬಾರದು. ರಾಹುಲ್ ಜೊತೆ ಸೇರಿ ಪಾದಯಾತ್ರೆ ಮಾಡಿದ ನಂತರ ಇವರು ಅವರಂತೆ ಆಗಿದ್ದಾರೆ. ರಾಹುಲ್ ಗಾಂಧಿ ಮಾತನಾಡಿದರೆ ತಿಳುವಳಿಕೆ ಇಲ್ಲ ಎಂಬ ಕನಿಕರ ಇರುತ್ತದೆ. ಆದರೆ, ಆ ಕನಿಕರದ ಅಗತ್ಯ ಸಿದ್ದರಾಮಯ್ಯಗೆ ಇಲ್ಲ" ಎಂದರು.
ಇದನ್ನೂ ಓದಿ: ಮಾ.11ಕ್ಕೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ: ಪೋಸ್ಟರ್ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಕೇಂದ್ರ ಸಚಿವ ಜೋಶಿ
ಈ ಸಲ ಕೆಲವು ಶಾಸಕರಿಗೆ ಟಿಕೆಟ್ ಇಲ್ಲವೆಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ನಮ್ಮ ಅತ್ಯುನ್ನತ ಮಂಡಳಿ ಸದಸ್ಯರು. ಅವರ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಟಿವಿ ನೋಡಿಲ್ಲ. ಮಾಧ್ಯಮದವರು ಹೇಳಿದ ಮೇಲೆಯೇ ಗೊತ್ತಾಯ್ತು ಎಂದ ಅವರು ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಮಾಡಾಳ್ ಮೆರವಣಿಗೆ ಮಾಡಿದ್ದಾರೆ. ಇದು ತಪ್ಪು. ಹಾಗೆ ಆಗಬಾರದು, ಸಾರಿ ಫಾರ್ ದಟ್ ಎಂದರು.
ರಾಜ್ಯಕ್ಕೆ 6ನೇ ಬಾರಿ ಮೋದಿ ಭೇಟಿ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂದು ಪಣತೊಟ್ಟ ಬಿಜೆಪಿ, ರಾಷ್ಟ್ರೀಯ ನಾಯಕರನ್ನು ರಾಜ್ಯಕ್ಕೆ ಕರೆತರುತ್ತಿದೆ ಅನ್ನೋದು ಕಾಂಗ್ರೆಸ್ ಟೀಕೆ. ಮಾರ್ಚ್ 12 ರಂದು ಪ್ರಧಾನಿ ಹುಬ್ಬಳ್ಳಿ-ಧಾರವಾಡ ಹಾಗೂ ಹಳೆ ಮೈಸೂರು ಭಾಗವಾದ ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. 2023 ರಲ್ಲಿ ಪ್ರಧಾನಿ ಮೋದಿಯವರ 6ನೇ ಭೇಟಿ ಇದಾಗಿದೆ.