ಹುಬ್ಬಳ್ಳಿ: ಕರ್ನಾಟಕಕ್ಕೆ ಭದ್ರಾ ಪ್ರೊಜೆಕ್ಟ್ ಮೂಲಕ ಬಹುದೊಡ್ಡ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಹೇಳಿದರು. ನಗರದಲ್ಲಿಂದು ಬಜೆಟ್ ವೀಕ್ಷಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಮಾಡಿರುವ ಬಜೆಟ್ ಅಲ್ಲ. ಇಂದು ಮಂಡಿಸಿರುವ ಬಜೆಟ್ ಮುಂದಿನ ದಿನಗಳಲ್ಲಿ ಜನರ ಅಭಿವೃದ್ಧಿಗಾಗಿಯೇ ಮಾಡಿರುವ ಬಜೆಟ್ ಎಂದು ಪ್ರಶಂಸಿಸಿದರು. ರೈಲ್ವೆ ಇಲಾಖೆಯ ಸರ್ವಾಂಗೀಣ ಅಭಿವೃದ್ಧಿಗೆ ದೊಡ್ಡಮಟ್ಟದ ಕೊಡುಗೆಯನ್ನು ಕೇಂದ್ರ ಬಜೆಟ್‌ನಲ್ಲಿ ಮಾಡಿರುವುದು ಹೊಸ ದಾಖಲೆಗೆ ನಾಂದಿ ಹಾಡಲಿದೆ. ಶಿಕ್ಷಣ, ಕೃಷಿ, ಸ್ಟಾರ್ಟಪ್ ಸೇರಿದಂತೆ ಎಲ್ಲ ವಲಯಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಭದ್ರಾ ಮೇಲ್ಡಂಡೆಗೆ ಬಂಪರ್: ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಕರ್ನಾಟಕಕ್ಕೆ ಭಾರಿ ಗಿಫ್ಟ್ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲಾಗಿದೆ. ಮಧ್ಯ ಕರ್ನಾಟಕಕ್ಕೆ ನೀರುಣಿಸುವ ಬಹುನಿರೀಕ್ಷಿತ ಯೋಜನೆಗೆ 5300 ಕೋಟಿ ರೂ.ಗಳ ಅನುದಾನ ಪ್ರಕಟಿಸಲಾಗಿದೆ. ರಾಜ್ಯದ ಪ್ರಮುಖ ನೀರಾವರಿ ಯೋಜನೆಗೆ ಭರ್ಜರಿ ಕೊಡುಗೆ ಸಿಕ್ಕಿದೆ ಎಂದರು.
ರೈಲ್ವೆಗೆ 2.40 ಲಕ್ಷ ಕೋಟಿ ಬಂಡವಾಳ: ರೈಲ್ವೆಗೆ 2.40 ಲಕ್ಷ ಕೋಟಿ ರೂ ಗಳ ಬಂಡವಾಳ ಒದಗಿಸಲಾಗಿದೆ. ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರ ಧಾನ್ಯ ಕ್ಷೇತ್ರಗಳನ್ನು ಪರಸ್ಪರ ಸಾಗಿಸಲು 100 ನಿರ್ಣಾಯಕ ಸಾರಿಗೆ ಯೋಜನೆ ಜಾರಿಗೊಳಿಸಲಾಗಿದೆ. ರೈಲ್ವೇ ಪ್ರಯಾಣಿಕರನ್ನು ಗಮದಲ್ಲಿಟ್ಟುಕೊಂಡು ರಾಜಧಾನಿ, ಶತಾಬ್ದಿ, ಡುರೊಂಟೊ, ಹಮ್ಸಫರ್ ಮತ್ತು ತೇಜಸ್‌ನಂತಹ ಪ್ರೀಮಿಯರ್ ರೈಲುಗಳ 1000ಕ್ಕೂ ಹೆಚ್ಚು ಬೋಗಿಗಳನ್ನು ನವೀಕರಣೆಗೆ ಆದ್ಯತೆ ನೀಡಲಾಗಿದೆ.
ರೈಲುಗಳ ವೇಗವನ್ನು ಹೆಚ್ಚಿಸಲು ಹಲವು ಕಡೆಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿ ಹಳೆಯ ಹಳಿಗಳನ್ನು ಬದಲಾಯಿಸಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ರೈಲ್ವೆಯು ಇನ್ನೂ 100 ವಿಸ್ಟಾಡೋಮ್ ಕೋಚ್‌ಗಳನ್ನು ತಯಾರಿಸಲು ಮುಂದಾಗಿರುವುದು ಹೆಮ್ಮೆಯ ವಿಚಾರ ಎಂದರು.
ಕೃಷಿ ಕ್ಷೇತ್ರಕ್ಕೂ ಆದ್ಯತೆ: ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಯೋಜನೆಗಳನ್ನು ನೀಡಿರುವ ನಿರ್ಮಲಾ ಸೀತರಾಮನ್ ಉದ್ಯಮಿಗಳಿಂದ ಕೃಷಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಕೃಷಿಕರಿಗೆ ನೀಡುವ ಸಾಲದ ಯೋಜನೆಯ ಕ್ರೆಡಿಟ್ ಗುರಿಯನ್ನು 20 ಲಕ್ಷ ಕೋಟಿವರೆಗೆ ವಿಸ್ತರಣೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂಓದಿ: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ: ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ ಬೊಮ್ಮಾಯಿ, ಕಾರಜೋಳ