ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ. ಆದರೆ ಹುಬ್ಬಳ್ಳಿ ಬೆಳೆದಂತೆ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಹೀಗಾಗಿ ಲ್ಯಾಂಡ್ ಮಾಫಿಯಾ, ಅನಧಿಕೃತ ಕಟ್ಟಡಗಳ ತಲೆ ಎತ್ತುತ್ತಲೇ ಇವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನಧಿಕೃತ ಕಟ್ಟಡ ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಕಡಿವಾಣ ಹಾಕುತ್ತಲೇ ಬರುತ್ತಿದೆ.
ಪಾಲಿಕೆ ವಲಯ ಕಚೇರಿ ಎದುರು ಅನಧಿಕೃತ ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಪಾಲಿಕೆಯ ಅನುಮತಿ ಪಡೆದುಕೊಳ್ಳದೇ ಕಾನೂನು ಉಲ್ಲಂಘಿಸಿ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆ ಮಾಲೀಕರಿಗೆ ಪಾಲಿಕೆ ಕಟ್ಟುನಿಟ್ಟಿನ ನೋಟಿಸ್ ನೀಡಿದರೂ, ಕವಡೆ ಕಾಸಿನ ಕಿಮ್ಮತ್ತು ಇಲ್ಲದಾಗಿದೆ.
ಪಾಲಿಕೆ ಆಯುಕ್ತರ ಭೇಟಿ, ಎಚ್ಚರಿಕೆ: ಹುಬ್ಬಳ್ಳಿ ಅಕ್ಷಯ ಪಾರ್ಕ್ ಮುಂಭಾಗದಲ್ಲಿ ಸರ್ವೇ ನಂಬರ್ 106/A ನಲ್ಲಿ ಫುಡ್ ಸ್ಟ್ರೀಟ್ ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಈಗಾಗಲೇ ಸೈಟ್ನಲ್ಲಿ ಬೋರ್ವೆಲ್, ವಿದ್ಯುತ್ ಸಂಪರ್ಕ ಕೂಡ ತೆಗೆದುಕೊಳ್ಳಲಾಗಿದೆ. ಆದರೆ ಈ ನಿರ್ಮಾಣಕ್ಕೆ ಪಾಲಿಕೆ ಅನುಮತಿ ನೀಡಿಲ್ಲ. ಹೀಗಿದ್ದರೂ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದ್ದು, ಮಹಾನಗರ ಪಾಲಿಕೆ ಆಯುಕ್ತರು ಭೇಟಿ ನೀಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
2 ದಿನಗಳಲ್ಲಿ ತೆರವಿಗೆ ಸೂಚನೆ: ಅನಧಿಕೃತ ವಾಣಿಜ್ಯ ಮಳಿಗೆ ನಿರ್ಮಿಸಿ ನಿಯಮ ಉಲ್ಲಂಘಿಸಿರುವುದರಿಂದ ಮಾಲೀಕರು ಶೀಘ್ರವೇ ತೆರವುಗೊಳಿಸಬೇಕೆಂದು ಪಾಲಿಕೆ ವಲಯ ಅಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ.
ಎರಡು ದಿನಗಳಲ್ಲಿ ತೆರವು ಮಾಡಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆದ್ರೂ ತೆರವು ಮಾಡದಿದ್ರೆ ಪಾಲಿಕೆ ಸಿಬ್ಬಂದಿಯಿಂದ ತೆರವು ಮಾಡಿ ತೆರವು ಕಾರ್ಯಾಚರಣೆ ಶುಲ್ಕವನ್ನು ತೆರಿಗೆ ರೂಪದಲ್ಲಿ ಪಡೆಯಲಾಗುವದು ಎಂದು ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಎಚ್ಚರಿಕೆ ನೀಡಿದ್ದಾರೆ.
ಆದರೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಇಂತಹ ಅನೇಕ ಅನಧಿಕೃತ ಕಟ್ಟಡಗಳು ಮಳಿಗೆಗಳು ತಲೆಯೆತ್ತುತ್ತಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಒಂದು ವೇಳೆ ಪಾಲಿಕೆ ಅನುಮತಿ ಇಲ್ಲದೆ ಕಟ್ಟಡ ವಾಣಿಜ್ಯ ಮಹಿಳೆ ಸೇರಿದಂತೆ ಇತರೆ ಕಟ್ಟಡ ಹಾಗೂ ಶೆಡ್ ನಿರ್ಮಾಣ ಮಾಡಿದ್ರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.