ಹುಬ್ಬಳ್ಳಿ : ನೇಣು ಬಿಗಿದುಕೊಂಡು ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಇಂದು ನಡೆದಿದೆ. ಕಾವೇರಿ ಹಡಪದ (17) ಮತ್ತು ಭೂಮಿಕಾ ಹಡಪದ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಾಯಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ತಾಯಿ ಕೆಲಸಕ್ಕೆಂದು ಹೊರಗಡೆ ಹೋದಾಗ ಸೀರೆಯಿಂದ ನೇಣು ಬಿಗಿದುಕೊಂಡು ಅಕ್ಕ ಮತ್ತು ತಂಗಿ ಇಬ್ಬರೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಹೋದರಿಯರ ಸಾವಿಗೆ ನಿಖರ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಈ ಘಟನೆ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೌಕರ ಆತ್ಮಹತ್ಯೆ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿತ್ತು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಖಾಯಂ ಸಿಬ್ಬಂದಿ ಪಡೀಲ್ ನಿವಾಸಿ ಕೀರ್ತನ್(35) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾಧಿಕಾರದ ಕಚೇರಿಯ ಹಳೆಯ ದಾಖಲೆ ಪತ್ರಗಳ ಸಂಗ್ರಹಣಾ ಕೊಠಡಿಯಲ್ಲಿ ಕೀರ್ತನ್ ಆತ್ಮಹತ್ಯೆಗೆ ಶರಣಾಗಿದ್ದರು.
ಇದನ್ನೂ ಓದಿ : ಬೆಂಗಳೂರಲ್ಲಿ ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಸಾವು
ಜೂನ್ 2ರ ಶುಕ್ರವಾರದಂದು ಕಚೇರಿಗೆ ಬಂದಿದ್ದ ಅವರು ಬೆಳಗ್ಗೆ 10 ಗಂಟೆ ಸುಮಾರಿಗೆ ಹಾಜರಿ ಹಾಕಿ ದಾಖಲೆಪತ್ರಗಳ ಸಂಗ್ರಹಣಾ ಕೊಠಡಿ ಕಡೆಗೆ ತೆರಳಿದ್ದರು. ಆ ಬಳಿಕ ಅವರು ಯಾರ ಕಣ್ಣಿಗೂ ಬೀಳದೇ ನಾಪತ್ತೆಯಾಗಿದ್ದರು. ಕಚೇರಿಯಲ್ಲೂ ಹುಡುಕಾಟ ನಡೆಸಿದ್ದು ಎಲ್ಲೂ ಪತ್ತೆಯಾಗಿರಲಿಲ್ಲ. ಜೊತೆಗೆ ಅವರಿಗೆ ಕರೆ ಮಾಡಿದ್ದರೂ ಕರೆ ಸ್ವೀಕರಿಸಿರಲಿಲ್ಲ. ಕಚೇರಿ ಸಿಬ್ಬಂದಿ ಎಲ್ಲೆಡೆ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ.
ಬಳಿಕ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಅವರು ದಾಖಲೆ ಪತ್ರಗಳ ಸಂಗ್ರಹಣಾ ಕೊಠಡಿಗೆ ಹೋಗಿರುವುದು ಗೊತ್ತಾಗಿದೆ. ಈ ವೇಳೆ ಆ ಕೊಠಡಿಯಲ್ಲಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು. ಮೃತರ ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ.
ಕೊಪ್ಪಳದಲ್ಲಿ ವಿಷ ಸೇವಿಸಿ ಇಬ್ಬರು ಆತ್ಮಹತ್ಯೆ : ಇತ್ತೀಚಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿಯಲ್ಲಿ ವಿಷ ಸೇವಿಸಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಮೃತರನ್ನು ಮಾಲಗಿತ್ತಿ ಗ್ರಾಮದ ಪೀರಸಾಬ (35), ಶಾರವ್ವ (30) ಎಂದು ಗುರುತಿಸಲಾಗಿತ್ತು.
ಪೀರಸಾಬ ಪತ್ನಿ ಮೃತ ಶಾರವ್ವಳೊಂದಿಗೆ ಜಗಳವಾಡಿದ್ದಳು. ಈ ಬಗ್ಗೆ ಗ್ರಾಮದ ಹಿರಿಯರು ಮಧ್ಯಸ್ಥಿಕೆ ವಹಿಸಿ ಇಬ್ಬರಿಗೂ ತಿಳುವಳಿಕೆ ಹೇಳಿ ಕಳುಹಿಸಿದ್ದರಂತೆ. ಬಳಿಕ ಪೀರಸಾಬನ ಹೊಲದಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ : ಆಸ್ತಿ ವಿವಾದ: ಮಾಜಿ ಸೈನಿಕನನ್ನು ಮಾರಕಾಸ್ತ್ರಗಳಿಂದ ಕೊಂದ ಚಿಕ್ಕಪ್ಪ