ಧಾರವಾಡ: ಸಾರಿಗೆ ನೌಕರರ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದರೆ, ಸರ್ಕಾರ ಪೊಲೀಸರ ಮೂಲಕ ಕಿರುಕುಳ ನೀಡುತ್ತಿದೆ ಎಂದು ಧಾರವಾಡ ವಿಭಾಗದ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಚ್. ನೀರಲಕೇರಿ ಆರೋಪಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಬಳಸಿ ಮೊಕದ್ದಮೆ ಹಾಗೂ ಎಫ್‌ಐಆರ್ ಹಾಕಿದರೆ ನಾವು ಹೆದರುವುದಿಲ್ಲ. ಎಸ್ಮಾ ಜಾರಿ ಮಾಡುತ್ತೇವೆ ಅಂತೀರಾ, ಹಾಗಾದರೆ ನಮ್ಮ ನ್ಯಾಯಯುತ ಬೇಡಿಕೆ ಏನಾದರೂ ಈಡೇರಿಸಿದ್ದೀರಾ, ಕಾರ್ಮಿಕ ಇಲಾಖೆಗೆ ಸರ್ಕಾರದ ನಿಗಮದಿಂದ ಸೌಲಭ್ಯ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಕಳೆದ 4 ದಶಕಗಳಿಂದ ಸಿಬ್ಬಂದಿಗೆ ಹಿಂಸೆ ಕೊಟ್ಟಿದ್ದಾರೆ. ಒಂದು ಕಡೆ ಕೋವಿಡ್ ನೆಪ, ಇನ್ನೊಂದು ಕಡೆ ಎಲೆಕ್ಷನ್ ನೆಪ, ಶೇ. 8 ರಷ್ಟು ಸಂಬಳ ಹೆಚ್ಚಳ ಎಂದು ಹೇಳಿದ್ದೀರಿ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗೋದಿಲ್ಲವೇ, ಕೊಡಬೇಕಾದ ಸೌಲಭ್ಯಗಳನ್ನು ಕೊಡುವುದಕ್ಕೆ ಆಗುತ್ತಿಲ್ಲ. ಆದರೆ ಎಸ್ಮಾ ಜಾರಿ ಮಾಡೋದಾಗಿ ಹೇಳುತ್ತಿದ್ದೀರಿ ಎಂದು ಹರಿಹಾಯ್ದರು.
ನಮ್ಮ ಕಾರ್ಮಿಕರಿಂದ ಯಾವುದೇ ತೊಂದರೆ ಆಗಿಲ್ಲ, ಕಾರ್ಮಿಕರು ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. 6ನೇ ವೇತನ ಆಯೋಗ ಜಾರಿ ಆಗೋವರೆಗೂ ಮುಷ್ಕರ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ.. ಮದಗಜ ಚಿತ್ರದ ಶೂಟಿಂಗ್ ವೇಳೆ ನಟ ಶ್ರೀಮುರಳಿ ಕಾಲಿಗೆ ಗಾಯ