ಹುಬ್ಬಳ್ಳಿ: ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣವು ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಶಕ್ತಿ ಯೋಜನೆ ಆರಂಭಗೊಂಡಾಗ 84 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಈಗ 1 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿದಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 884 ಹೊಸ ಬಸ್ಗಳನ್ನು ಪೂರೈಸಲಾಗುತ್ತದೆ. ಅದರಲ್ಲಿ 100 ಎಲೆಕ್ಟ್ರಿಕ್ ಬಸ್ಗಳನ್ನು ಹುಬ್ಬಳ್ಳಿ -ಧಾರವಾಡ ನಗರ ಸಂಚಾರಕ್ಕೆ ನೀಡಲಾಗುತ್ತದೆ. ಉಳಿದ 784 ಬಸ್ಗಳು ಫೆಬ್ರವರಿ ಕೊನೆಯಲ್ಲಿ ಬರಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇಂದು ಗೋಕುಲ್ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಸಾರಿಗೆ ನಿಗಮಗಳಲ್ಲಿ ನೀಡಲಾಗುವ ಅಪಘಾತ ಪರಿಹಾರ ವಿಮೆಯಂತೆ ಈ ಸಂಸ್ಥೆಯಲ್ಲಿಯೂ ಸಹ ರೂ.1 ಕೋಟಿ ಅಪಘಾತ ಪರಿಹಾರ ವಿಮೆಯನ್ನು ಹೆಚ್ಚಿಸಬೇಕಾಗಿದೆ. 9 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. 3,800 ಬಸ್ಗಳು ಕೋವಿಡ್ ಸಮಯದಲ್ಲಿ ಬಂದ್ ಆಗಿದ್ದವು. ಈಗ ಪುನಃ ಆರಂಭಗೊಂಡಿವೆ. ಇದರಿಂದ ಶಕ್ತಿ ಯೋಜನೆಗೆ ಬಸ್‌ಗಳ ಕೊರತೆ ನೀಗಿದಂತಾಗಿದೆ. ಈ ಭಾಗದ ಜನರಿಗೆ ಹಳೆ ಬಸ್ಗಳನ್ನು ಕೊಡದೇ ಬ್ರ್ಯಾಂಡ್ ಹೊಸ ಬಸ್ಗಳನ್ನು ನೀಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡಿ, 13 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. 23 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣವನ್ನು ನವೀಕರಣಗೊಳಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.
ಪಲ್ಲಕ್ಕಿ ಬಸ್‌ಗಳ ವಿಶೇಷ: ಐಷಾರಾಮಿ ವ್ಯವಸ್ಥೆ ಇರುವ ಬಿಎಸ್6 ನಾನ್ ಎಸಿ- ಸ್ಲೀಪರ್ 4 ಪಲ್ಲಕ್ಕಿ ಬಸ್ಗಳನ್ನು ಈ ದಿನ ಲೋಕಾರ್ಪಣೆ ಮಾಡಲಾಯಿತು. ಈ ಬಸ್ಸುಗಳು 30 ಸೀಟು ಹೊಂದಿರುತ್ತವೆ. ಪ್ರತಿ ವಾಹನದ ಬೆಲೆ 45 ಲಕ್ಷ ರೂಪಾಯಿಗಳಾಗಿದ್ದು, ಇನ್ನೂ 6 ವಾಹನಗಳು ಈ ತಿಂಗಳ ಅಂತ್ಯದ ಒಳಗೆ ಬರಲಿವೆ ಹಾಗೂ ಇನ್ನೂ 10 ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ಬಿಜೆಪಿ ಟೀಕೆಗೆ ರಾಮಲಿಂಗಾರೆಡ್ಡಿ ತಿರುಗೇಟು: ಮತ್ತೊಂದೆಡೆ, ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ಏನೂ ಕೆಲಸ ಮಾಡಲಿಲ್ಲ. ಕೆಲಸ ಮಾಡೋರಿಗೂ ಬಿಡಲ್ಲ. ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ. ಕೆಲಸ ಮಾಡದಿದ್ದಕ್ಕೆ ಜನರು ಬಿಜೆಪಿಯವರನ್ನು ಮನೆಗೆ ಕಳಿಸಿದರು. ಪ್ರತಿ ದಿನ 60 ಲಕ್ಷ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಓಡಾಡ್ತಿದ್ದಾರೆ. ಇದರ ಬಗ್ಗೆ ಟೀಕಿಸಿದರೆ ಅವರ ಶಾಪ ಬಿಜೆಪಿಯವರಿಗೆ ತಟ್ಟುತ್ತೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗಿಮಿಕ್ ಮಾಡ್ತಿದಾರೆ. ಕೇಂದ್ರದ ಮಂತ್ರಿ ಅಂಕಿ ಸಂಖ್ಯೆ ಇಟ್ಕೊಂಡು ಮಾತಾಡಬೇಕು ಎಂದು ರಾಮಲಿಂಗಾರೆಡ್ಡಿ ಇದೇ ವೇಳೆ ತಿರುಗೇಟು ನೀಡಿದರು.
ಇದನ್ನೂ ಓದಿ: 'ಬಿಜೆಪಿಯವರು ತಾವು ಕೆಲಸ ಮಾಡುವುದಿಲ್ಲ, ಮಾಡುವವರನ್ನೂ ಬಿಡುವುದಿಲ್ಲ'