ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆಯಾಗಿದೆ. ಅವಳಿ ನಗರಗಳು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಕಸ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಸ ವಿಲೇವಾರಿ ಮಾಡಲು ವಾಹನಗಳ ಸೌಲಭ್ಯವಿಲ್ಲದೇ ಪೌರ ಕಾರ್ಮಿಕರು ಪರದಾಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಪ್ರತಿ ವಾರ್ಡ್‌ಗೆ ಕಸ ಸಂಗ್ರಹಕ್ಕೆಂದು ಟಿಪ್ಪರ್ ಮತ್ತು ಟ್ರಾಕ್ಟರ್‌ಗಳನ್ನು ಪಾಲಿಕೆಯಿಂದ ನೀಡಲಾಗಿದೆ.
ಆದರೆ ಅವುಗಳು ಸಮರ್ಪಕವಾಗಿಲ್ಲ. ಹೀಗಾಗಿ ಬಾಡಿಗೆ ವಾಹನಗಳನ್ನು ಪಡೆದು ಕಸ ಸಂಗ್ರಹ ಮಾಡಲಾಗುತ್ತಿದೆ. ಇದರ ಹೊರೆಯನ್ನು ತಪ್ಪಿಸಲು ಪಾಲಿಕೆ, ವಿವಿಧ ಯೋಜನೆಗಳಡಿ ಕೋಟ್ಯಂತರ ಹಣ ಖರ್ಚು ಮಾಡಿ ಟ್ರ್ಯಾಕ್ಟರ್ ಖರೀದಿ ಮಾಡಿತ್ತು. ವಿಪರ್ಯಾಸವೆಂದರೆ, ಪಾಲಿಕೆ ಆಯುಕ್ತರ ನಿವಾಸದ ಹಿಂಭಾಗದಲ್ಲಿ ಕಳೆದ ಐದಾರು ತಿಂಗಳಿಂದ ಟ್ರ್ಯಾಕ್ಟರ್ಗಳು ನಿಂತಲ್ಲೇ ನಿಂತು ಬಿಸಿಲು, ಮಳೆಗೆ ತುಕ್ಕು ಹಿಡಿಯುತ್ತಿವೆ.
ಈ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಮಾತನಾಡಿ, "ನಾವು ಈಗಾಗಲೇ 36 ಹೊಸ ಟ್ರ್ಯಾಕ್ಟರ್ಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಖರೀದಿ ಮಾಡಿದ್ದೇವೆ. ಖರೀದಿಗೂ ಹಿಂದೆ ಮನೆ ಮನೆ ಕಸ ಸಂಗ್ರಹಣೆಗೆ ಎಷ್ಟು ಟ್ರ್ಯಾಕ್ಟರ್ ಕಡಿಮೆ ಇವೆಯೋ ಅಷ್ಟನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ಕಸ ಸಂಗ್ರಹಣೆ ಮಾಡಲಾಗುತ್ತಿತ್ತು. ಹೊಸ ಟ್ರ್ಯಾಕ್ಟರ್ಗಳನ್ನು ಆರ್ಟಿಓ ಪಾಸಿಂಗ್ಗೆ ಕಳುಹಿಸಲಾಗಿದೆ. ಇಂದು ಅಥವಾ ನಾಳೆ ಪಾಸಿಂಗ್ ಸಿಗುವ ಸಾಧ್ಯತೆ ಇದೆ. ಯಾವ ವಾರ್ಡ್ಗಳಲ್ಲಿ ಎಷ್ಟು ಟ್ರ್ಯಾಕ್ಟರ್ಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದೇವೆ ಎಂಬ ಮಾಹಿತಿ ಇದೆ. ಅಲ್ಲಿಗೆ ಹೊಸ ಟ್ರ್ಯಾಕ್ಟರ್ಗಳನ್ನು ನೀಡಲಾಗುತ್ತದೆ " ಎಂದರು.
ಇದನ್ನೂ ಓದಿ: ಜಾಗದ ಹಕ್ಕುಪತ್ರ ಬೇರೆಯವರಿಗೆ ವಿತರಣೆ; ನ್ಯಾಯಕ್ಕಾಗಿ ಮೂಲ ಹಕ್ಕುಪತ್ರದಾರರಿಂದ ಆಕ್ರೋಶ
ಹು-ಧಾ ಹೊಸ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರ್ ಅಧಿಕಾರ ಸ್ವೀಕಾರ: ಹಿರಿಯ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ್ ಅವರು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ ನಿನ್ನೆ (ಗುರುವಾರ) ಅಧಿಕಾರ ಸ್ವೀಕರಿಸಿದರು. ಇವರು ಹು-ಧಾ ಪೊಲೀಸ್ ಕಮೀಷನರೇಟ್ನ ಮೊದಲ ಮಹಿಳಾ ಕಮಿಷನರ್ ಆಗಿದ್ದಾರೆ. ಈ ಹಿಂದಿನ ಕಮಿಷನರ್ ಸಂತೋಷ ಬಾಬು ಅವರಿಂದ ತೆರವಾದ ಸ್ಥಾನಕ್ಕೆ ರೇಣುಕಾ ಸುಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದಕ್ಕೂ ಮುನ್ನ, ಕಮಿಷನರೇಟ್ನಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸಿದ್ದರು.
ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಾ ಸುಕುಮಾರ್, "ಅವಳಿ ನಗರದ ಕಮೀಷನರ್ ಆಗಿ ಬಂದಿರುವುದಕ್ಕೆ ಸಂತಸವಾಗಿದೆ. ಪೊಲೀಸ್ ಇಲಾಖೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಈ ಹಿಂದೆ ಇಲ್ಲಿಯೇ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ. ಸರ್ಕಾರ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇನೆ. ರೌಡಿಗಳ ಹಾವಳಿ ಮಟ್ಟಹಾಕಲಾಗುತ್ತದೆ" ಎಂದು ಭರವಸೆ ನೀಡಿದ್ದರು.