ಹುಬ್ಬಳ್ಳಿ: ತೀವ್ರ ಕುತೂಲಹ ಕೆರಳಿಸಿರುವ ಧಾರವಾಡ ಲೋಕಸಭಾ ಕ್ಷೇತ್ರದ ಜೊತೆಗೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಪಚುನಾವಣೆಯ ಫಲಿತಾಂಶವೂ ನಾಳೆ ಹೊರಬೀಳಲಿದೆ.
ಲೋಕಸಭಾ ಅಖಾಡದಲ್ಲಿ ಬಿಜೆಪಿ ಪ್ರಹ್ಲಾದ್ ಜೋಶಿ ಮತ್ತು ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಮಧ್ಯೆ ನೇರ ಹಣಾಹಣಿ ಇದೆ. ಇತ್ತ ಕುಂದಗೋಳ ವಿಧಾನಸಭೆಯ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ನಡುವೆ ನೇರ ಪೈಪೋಟಿ ಇದ್ದು ಅಂತಿಮವಾಗಿ ಗೆಲುವು ಯಾರಿಗೆ ಅನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.
ಪ್ರತಿಷ್ಠೆಯ ಪ್ರಶ್ನೆ:
ಕುಂದಗೋಳದ ಗೆಲುವು ಕೇವಲ ಕುಸುಮಾ ಹಾಗೂ ಚಿಕ್ಕನಗೌಡರ ಅವರಿಗೆ ಮಾತ್ರವಲ್ಲದೆ ಮೈತ್ರಿ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಸಹ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ಘೋಷಣೆಯಾಗಿದ್ದ ದಿನದಿಂದ ಕುಂದಗೋಳದಲ್ಲಿ ಬೀಡು ಬಿಟ್ಟಿದ್ದ ಮೈತ್ರಿ ಹಾಗೂ ಕಮಲ ಪಡೆಯ ನಾಯಕರ ಶ್ರಮದ ಪ್ರತಿಫಲ ನಾಳೆ ಗೊತ್ತಾಗಲಿದೆ. ಈ ಕಾರಣದಿಂದಾಗಿಯೇ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ಪ್ರಚಾರಕ್ಕಾಗಿ ಪಕ್ಷದ ಪ್ರಭಾವಿ ನಾಯಕರ ದಂಡೇ ಕ್ಷೇತ್ರದೆಡೆಗೆ ಹರಿದು ಬಂದಿದ್ದರು.
ಅನುಕಂಪ ತೋರುತ್ತಾರಾ ಮತದಾರ ಪ್ರಭುಗಳು:
ಇತ್ತೀಚೆಗೆ ಸಚಿವ ಸಿ.ಎಸ್. ಶಿವಳ್ಳಿ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರು. ಇವರಿಂದ ತೆರವಾದ ಕ್ಷೇತ್ರಕ್ಕೆ ಮರುಚುನಾವಣೆ ಆಗಿದ್ದು, ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಮತದಾರರು ಅನುಕಂಪದಿಂದ ಮತ ನೀಡಿ ಗೆಲ್ಲಿಸುತ್ತಾರಾ ಅಥವಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಪರಾಜಿತರಾಗಿದ್ದ, ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಅವರಿಗೆ ಜನರು ಜೈ ಅಂತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಲೋಕಸಭಾ ಸ್ಥಾನ ಅಲಂಕರಿಸುವವರು ಯಾರು:
ಇನ್ನು ಧಾರವಾಡ ಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ನಾಳೆ ಪ್ರಕಟವಾಗಲಿರುವ ಫಲಿತಾಂಶ ಯಾರ ಪರ ಇರಲಿದೆ ಅನ್ನೋದನ್ನು ಧಾರವಾಡ ಜಿಲ್ಲೆಯ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.