ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಯಾವುದೇ ಪ್ರಸ್ತಾಪ ಇಲ್ಲ. ಈ ಬಗ್ಗೆ ರಾಷ್ಟ್ರೀಯ ನಾಯಕತ್ವದಲ್ಲಿಯೂ ಯಾವುದೇ ಚರ್ಚೆ ಆಗಿಲ್ಲ. ಈ ವಿಚಾರದಲ್ಲಿ ಜಗದೀಶ ಶೆಟ್ಟರ್ ಹೆಸರನ್ನು ಯಾರು ಮುನ್ನೆಲೆಗೆ ತಂದಿದ್ದಾರೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಲೋಪವಾದ ಧ್ವಜಗಳನ್ನು ಪರಿಶೀಲನೆ ಮಾಡದೇ ಸ್ವೀಕಾರ ಮಾಡಲಾಗಿದೆ. ತಪ್ಪೆಸಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗಾಗಿ ಹಿಂದೂ ಸಂಘಟನೆಗಳ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಈದ್ಗಾ ಮೈದಾನ ಪಾಲಿಕೆ ವ್ಯಾಪ್ತಿಯಲ್ಲಿದೆ. ಈ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸ್ವತಂತ್ರ ಅಧಿಕಾರ ಇದೆ. ಇದರ ಬಗ್ಗೆ ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟ ವಿಚಾರ. ಧಾರ್ಮಿಕ ಆಚರಣೆ ವಿಚಾರವಾಗಿ ಸುಪ್ರೀಂ ಕೋರ್ಟ್ನಿಂದಲೇ ಆದೇಶವಿದೆ. ಹೀಗಾಗಿ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ: ಜಗದೀಶ್ ಶೆಟ್ಟರ್