ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರ ಪಾಲಿನ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲೀಗ ಸರಿಯಾದ ಆ್ಯಂಬ್ಯುಲೆನ್ಸ್ ವ್ಯವಸ್ಥೆಯಿಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಗದಗ, ಹಾವೇರಿ, ಬಾಗಲಕೋಟೆ, ಧಾರವಾಡ, ಶಿರಸಿ, ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಲಕ್ಷಾಂತರ ಜನರು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ನಿತ್ಯ ಸಾವಿರಾರು ರೋಗಿಗಳು ಆಗಮಿಸುವ ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೇವಲ ನಾಲ್ಕು ಆ್ಯಂಬ್ಯುಲೆನ್ಸ್ಗಳು ಮಾತ್ರ ಇವೆ.
ಅದರಲ್ಲಿಯೂ ಒಂದು ಚಿಕ್ಕ ಆ್ಯಂಬ್ಯುಲೆನ್ಸ್ ಅನ್ನು ಸಿಂಡಿಕೇಟ್ ಬ್ಯಾಂಕ್ನವರು ನೀಡಿದ್ದಾರೆ. ಉಳಿದ ಎರಡು ಆ್ಯಂಬ್ಯುಲೆನ್ಸ್ಗಳು ಕಿಮ್ಸ್ ಆಸ್ಪತ್ರೆಗೆ ಸೇರಿವೆ. ಮತ್ತೊಂದು "ನಗುಮಗು" ವಾಹನ ಇದ್ದು ಡೆಲಿವರಿ ಆದ ರೋಗಿಗಳಿಗೆ ಮಾತ್ರ ಸೀಮಿತವಾಗಿದ್ದು, ಒಂದು ಕಡೆ ಕೆಟ್ಟು ನಿಂತಿದೆ. ಕಳೆದ 5 ವರ್ಷಗಳಿಂದ ಈ ಎರಡು ಆ್ಯಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿಲ್ಲ.
ಇದರಿಂದ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಅನಧಿಕೃತವಾಗಿ ಖಾಸಗಿ ಆ್ಯಂಬುಲೆನ್ಸ್ ವಾಹನಗಳ ಹಾವಳಿ ಜೋರಾಗಿದೆ. ಕೇವಲ ಮೂರು ಆ್ಯಂಬ್ಯುಲೆನ್ಸ್ಗಳು ಇರುವುದರಿಂದ, ಚಿಕಿತ್ಸೆ ಪಡೆದು ಬೇರೆ ಊರುಗಳಿಗೆ ಹೋಗಲು ಹಾಗೂ ಕಿಮ್ಸ್ನಿಂದ ಮತ್ತೊಂದು ಆಸ್ಪತ್ರೆಗೆ ಹೋಗಲು ಖಾಸಗಿ ವಾಹನಗಳ ಮೇಲೆ ಬಡ ಜನತೆ ಅವಲಂಬಿತರಾಗಿದ್ದಾರೆ. ಕಿಮ್ಸ್ ಆಸ್ಪತ್ರೆಯನ್ನು ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಮಾಡಲು ಹೊರಟಿರುವ ಸರ್ಕಾರ ಮೊದಲು ಸಾರ್ವಜನಿಕರಿಗೆ ಉಚಿತವಾಗಿ ಆ್ಯಂಬ್ಯುಲೆನ್ಸ್ ಸೇವೆ ನೀಡಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.