ಧಾರವಾಡ: ಜಮೀನು ಉಳುಮೆಗೆಂದು ಬಂದಿದ್ದ ಮಹಿಳೆಗೆ ಗಂಡನ ಸಹೋದರರೇ ಆಸ್ತಿ ವಿಚಾರವಾಗಿ ಜಗಳ ತೆಗೆದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಿಗದಿ ಗ್ರಾಮದ ಸುಶೀಲಾ ಹಳಿಯಾಳ ಎಂಬ ಮಹಿಳೆ ಹಲ್ಲೆಗೊಳಗಾಗಿದ್ದು, ಆಸ್ತಿ ವಿಚಾರಕ್ಕೆ ಸಂಬಂದಧಿಸಿದಂತೆ ಮೂರು ದಿನಗಳ ಹಿಂದೆ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಹೋದಾಗ ಗಂಡನ ಸಹೋದರರು ಮತ್ತು ಕುಟುಂಬದವರು ಸೇರಿ ಸ್ವಂತ ಅತ್ತಿಗೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಸುಶೀಲಾ ಆರೋಪಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಮಹಿಳೆ ಸುಶೀಲಾ ಸದ್ಯ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಶೀಲಾ ಅವರ ಗಂಡನ ಸ್ವಂತ ತಮ್ಮಂದಿರಾದ ಮಂಜುನಾಥ, ಪರಮೇಶ್ವ, ಮಡಿವಾಳಪ್ಪ ಮತ್ತು ಈಶ್ವರ ಎಂಬುವವರೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಹಲವು ವರ್ಷಗಳಿಂದಲೂ ಕುಟುಂಬದವರಿಂದ ಬೇರೆಯೇ ವಾಸವಾಗಿದ್ದ ಭೀಮಪ್ಪ ಹಳಿಯಾಳ ಮತ್ತು ಆತನ ಕುಟುಂಬ ಅವರ ತಂದೆಯಿಂದ ಪಿತ್ರಾರ್ಜಿತವಾಗಿ ಬಂದಿದ್ದ 6 ಎಕರೆ ಆಸ್ತಿಯಲ್ಲಿ ಸಹೋದರರು ಮೂರು ಎಕರೆ ಕಸಿದುಕೊಂಡಿದ್ದರು. ನಂತರ ಮತ್ತೆ ಸದ್ಯ ಇವರಿಗೆ ಇರುವ ಮೂರು ಎಕರೆ ಆಸ್ತಿಯನ್ನು ಬಿಟ್ಟು ಕೊಡುವಂತೆ ಹಿಂದೆ ಬಿದ್ದಿದ್ದು, ಮೂರು ದಿನಗಳ ಹಿಂದೆ ಜಮೀನಿನಲ್ಲಿ ಉಳುಮೆ ಮಾಡಲು ಬಂದಿದ್ದ ವೇಳೆ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ. ಪೊಲೀಸರಿಗೆ ದೂರು ನೀಡದಂತೆ ಸುಶೀಲಾಗೆ ಬೆದರಿಕೆ ಕೂಡಾ ಹಾಕಿ ಪ್ರತಿದಿನ ಮನೆಯಿಂದ ಹೊರ ಹೋಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.