ಹುಬ್ಬಳ್ಳಿ: ಪಂಜಾಬ್ನಲ್ಲಿ ದೇಶಸೇವೆ ಸಲ್ಲಿಸುತ್ತಿರುವ ಸೈನಿಕರೊಬ್ಬರ ಜನ್ಮದಿನವನ್ನು ಅವರ ಪುತ್ರ ವಿಶಿಷ್ಟವಾಗಿ ಆಚರಿಸುವ ಮೂಲಕ ಚಿಕ್ಕಮಕ್ಕಳಲ್ಲಿ ದೇಶ ಪ್ರೇಮ ಮೂಡಿಸಿದ್ದಾರೆ.
ಇಲ್ಲಿನ ನವನಗರ ನಿವಾಸಿಯಾದ ಹನಮಂತಪ್ಪ ಜಂಗಾನಿ ಅವರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶ ಸೇವೆ ಸಲ್ಲಿಸುತ್ತಿರುವ ತಮ್ಮ ತಂದೆಯ ಜನ್ಮದಿನವನ್ನು ಪುತ್ರ ಸುನಿಲ್ ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಂದೆಯ ಹುಟ್ಟು ಹಬ್ಬದ ಅಂಗವಾಗಿ ತಮ್ಮ ಗೆಳೆಯರ ಜೊತೆ ಸೇರಿಕೊಂಡು ತಂದೆಗೆ ವಿಡಿಯೋ ಕರೆ ಮಾಡಿ ಧಾರವಾಡದ ಶಿವನಗರದ ಗೋಳಿ ಅರಣ್ಯವಾಸಿ ಜನಾಂಗದ ಚಿಕ್ಕ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು.
ತಂದೆ ದೇಶ ಕಾಯುವ ಸೈನಿಕನಾಗಿದ್ದು, ಅವರ ಜನ್ಮ ದಿನವನ್ನು ಬಡ ಮಕ್ಕಳೊಂದಿಗೆ ಆಚರಿಸಿದ್ದು, ಅವರಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣವಂಚಿತನಾಗಬಾರದು ಮೋದಿ ಜಿ ಎಂಬ ಪೋಸ್ಟರ್ ಹಿಡಿಯುವ ಮೂಲಕ, ನಮಗೂ ಶಿಕ್ಷಣ ಬೇಕು ಮತ್ತು ನಾವು ಚಿಕ್ಕ ಹಳ್ಳಿಯವರು ಆದರೆ ದೊಡ್ಡ ಮನಸ್ಸಿನವರು ಎಂದು ನೂರಾರು ಮಕ್ಕಳು ಘೋಷಣೆ ಕೂಗಿದರು.
ಈ ವೇಳೆ ಎಲ್ಲ ಮಕ್ಕಳಿಗೆ ಚಾಕೋಲೆಟ್, ಪೆನ್ಸಿಲ್, ರಬ್ಬರ್, ಸ್ಕೆಚ್ ಪೆನ್ ಮತ್ತು ಪುಸ್ತಕಗಳನ್ನು ವಿತರಿಸುವ ಮೂಲಕ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ಆಟದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಸಂತಸಪಟ್ಟರು.