ಧಾರವಾಡ: 43ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ರೈತರ ಮುಂದಿನ ಘೋಷಣಾ ಸಮಾವೇಶ ಶುಕ್ರವಾರ ಜರುಗಿತು. ನವಲಗುಂದದಲ್ಲಿನ ಬಸಪ್ಪ ಲಕ್ಕುಂಡಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭೆಯ ನಿರ್ಣಯ ಮಂಡನೆ ಬಳಿಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಸಮಾವೇಶದಲ್ಲಿ ಒಟ್ಟು 16 ನಿರ್ಣಯ ಮಂಡನೆ ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸ್ವಾಗತಿಸಿ ಆದರೆ ರೈತ ವಿರೋಧಿ ಕಾಯಿದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ರೈತ ಆತ್ಮಹತ್ಯೆ ತಡೆಯಲು ರೈತರ ಸಾಲಮನ್ನಾ ಮಾಡಬೇಕು. ರೈತ ಆದಾಯ ಆಯೋಗ ರಚಿಸಬೇಕು. ರಾಜ್ಯದ 100 ತಾಲೂಕುಗಳಲ್ಲಿ ಶೀಘ್ರ ಬರ ಘೋಷಿಸಬೇಕು. ಪಡಿತರಕ್ಕೆ ಬೇಕಾದ ಧಾನ್ಯಗಳನ್ನು ರಾಜ್ಯದ ರೈತರಿಂದ ಖರೀದಿಸಬೇಕು. ಕೊಬ್ಬರಿಗೆ ಕನಿಷ್ಠ 20,000 ಬೆಂಬಲ ಬೆಲೆ ಘೋಷಿಸಬೇಕು. ಬಲವಂತದ ಕೃಷಿ ಸಾಲ ವಸೂಲಿ ನಿಲ್ಲಿಸಬೇಕು. ಬೆಳೆ ವಿಮೆ ಪಾವತಿಯಲ್ಲಿ ನ್ಯಾಯ ಒದಗಿಸಬೇಕು. ಮಹದಾಯಿ ಜಾರಿಗೆ ಸರ್ಕಾರ ತನ್ನ ಬದ್ಧತೆ ಪರಿಶೀಲಿಸಬೇಕು. ಸರ್ಕಾರಿ ಕಚೇರಿಗಳಲ್ಲಿನ ಮಧ್ಯವರ್ತಿ ಹಾವಳಿ ತಡಯಬೇಕು ಎಂಬುದು ಸೇರಿ 16 ನಿರ್ಣಯ ಮಂಡಿಸಲಾಗಿದೆ ಎಂದರು.
ಕಳಸಾ ಬಂಡೂರಿ ಕುಡಿಯುವ ನೀರು ಯೋಜನೆ ವಿಚಾರಕ್ಕೆ ಮಾತನಾಡಿದ ಅವರು, ನಾಲ್ಕು ಜಿಲ್ಲೆ 14 ತಾಲೂಕುಗಳಿಗೆ ಅನುಕೂಲವಾಗುವ ಯೋಜನೆ ಇದಾಗಿದೆ. ಅದು ರಾಜಕೀಯವಾಗಿ ಬಳಕೆಯಾಗುತ್ತಿದೆ. ವ್ಯಕ್ತಿಗಳು, ರಾಜಕೀಯ ಪಕ್ಷಗಳು ಬಳಸಿಕೊಂಡಿವೆ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು. ಕುಡಿಯುವ ನೀರಿನ ಯೋಜನೆ ಸ್ಪಷ್ಟವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಭೂ ಸುಧಾರಣೆ ಕಾಯ್ದೆ ಬದಲಿಸಿ ರೈತರು ಗ್ರಾಮೀಣ ಜನರು, ಯುವಕರು ದುಡಿಯುವ ಜನರ ಪರ ಹೋರಾಟ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.
ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರ: ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯಿದೆ ಕಾನೂನು ತಂದು ಬಿಟ್ಟು ಅನಾನುಕೂಲ ಮಾಡಿದರು. ಇದು ಭಾವನಾತ್ಮಕ ವಿಚಾರ ಒಂದೇ ಅಲ್ಲಾ ಇಲ್ಲಿ ಹೈನೋಧ್ಯಮ ಇದೆ, ಚರ್ಮೋದ್ಯಮ ಇದೆ. ಇದು ಎಲ್ಲಾ ರಾಷ್ಟ್ರ ಮತ್ತು ರಾಜ್ಯಗಳಿಗೆ ಆದಾಯ ತರುವುದು. ರೈತರಿಗಿಂತ ಹಸುಗಳ ಮೇಲೆ ಪ್ರೀತಿ ಯಾಕೆ?. ಯಾರು ದುಡಿಯುವ ಹಸು ಹಾಲು ಕೊಡುವ ಹಸು ಮಾರುವುದಿಲ್ಲ. ಯೋಗ್ಯವಾದ ಹಸು ಮಾತ್ರ ಇಟ್ಟುಕೊಳ್ಳುತ್ತೇವೆ. ಯೋಗ್ಯಕ್ಕೆ ಸೂಕ್ತವಲ್ಲದ ಹಸುಗಳನ್ನು ಮಾರುತ್ತೇವೆ. ಇದು ಒಂದು ಪ್ರಕ್ರಿಯೆ. ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ತಂದರು, ಗೋಶಾಲೆ ತಂದರು. ನಮ್ಮ ಹಸುಗಳನ್ನು ಅಲ್ಲಿ ಬಿಟ್ಟರೆ ನಾವೇ ಮೇವು ಕೊಡಬೇಕು ಎಂದದ್ದಲ್ಲದೆ ನಿಷೇಧದ ಬಗ್ಗೆ ರೈತರು ಒಲುವು ಸ್ಪಷ್ಟವಾಗಿದೆ ಎಂಬ ಅಭಿಪ್ರಾಯ ನೀಡಿದರು.
ಇದನ್ನೂ ಓದಿ: ಗ್ರಾಹಕರಿಗೆ ಶಾಕ್... Milk Price Hike: ಆಗಸ್ಟ್ 1ರಿಂದ ಪ್ರತಿ ಲೀಟರ್ ನಂದಿನಿ ಹಾಲಿನ ದರ 3 ರೂ. ಹೆಚ್ಚಳ