ಹುಬ್ಬಳ್ಳಿ: ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಂಡು ವಂಚನೆ ಮಾಡುವ ವಂಚಕರ ಜಾಲ ಸದ್ಯ ನಗರದಲ್ಲಿ ಫುಲ್ ಆ್ಯಕ್ಟಿವ್ ಆಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಯುವಕನೊಬ್ಬ ವಂಚಕ ಜಾಲದಲ್ಲಿ ಸಿಲುಕಿ ಒದ್ದಾಡಿದ್ದಾರೆ.
ವಿಡಿಯೋ ಕಾಲ್ ಮೂಲಕ ಸ್ಕ್ರೀನ್ ಶಾಟ್ ತೆಗೆದುಕೊಂಡು ಸಂತ್ರಸ್ತರನ್ನು ಬ್ಲಾಕ್ಮೇಲ್ ಮಾಡುವ ಮೂಲಕ ಆರೋಪಿಗಳು ವಂಚಿಸುತ್ತಿದ್ದಾರೆ. ವ್ಯಕ್ತಿಯೊಬ್ಬರಿಗೆ ಅಪರಿಚಿತ ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಇವರ ಇಬ್ಬರ ಮಧ್ಯೆ ಸಲುಗೆ ಬೆಳೆದಿದೆ. ಆಗ ಯುವತಿ ನಗ್ನ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮತ್ತು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾಳೆ.
ವಿಡಿಯೋ ಕಾಲ್ ಮಾಡಿ ನಗ್ನ ದೃಶ್ಯ ತೋರಿಸಿದ ನಂತರ ಪೊಲೀಸ್ ಹೆಸರಲ್ಲಿ ಹಾಗೂ ಯುಟೂಬರ್ ಹೆಸರಲ್ಲಿ ಸಂತ್ರಸ್ತನಿಗೆ ಬೆದರಿಕೆ ಹಾಕಿದ್ದಾಳೆ. ಹಣ ನೀಡು ಈ ಎಲ್ಲ ವಿವರಗಳನ್ನು ಡಿಲಿಟ್ ಮಾಡ್ತಿನಿ, ಇಲ್ಲವಾದಲ್ಲಿ ಈ ಎಲ್ಲ ವಿವರಗಳನ್ನು ಪೊಲೀಸರಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಯುವತಿ ಸಂತ್ರಸ್ತನಿಗೆ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಯುವತಿಯ ಬೆದರಿಕೆಗೆ ಹೆದರಿದ ಸಂತ್ರಸ್ತ ಆಕೆಗೆ ನಾಲ್ಕು ಕಂತುಗಳಲ್ಲಿ ಸುಮಾರು 2.40 ಲಕ್ಷ ಹಣವನ್ನು ಪಾವತಿಸಿದ್ದಾರೆ. ಆದರೂ ಸಹ ಯುವತಿಯಿಂದ ಕಾಲ್ ಬರುತ್ತಲೇ ಇದೆ. ಇದರಿಂದ ಮನನೊಂದ ಸಂತ್ರಸ್ತ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಪೊಲೀಸರ ಹೆಸರಲ್ಲಿ ಮಾತನಾಡಿದ ವಂಚಕರು 2.40 ಲಕ್ಷ ಹಣವನ್ನು ಜಮಾ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಸಾಕಷ್ಟು ಸೈಬರ್ ಕ್ರೈಮ್ ಪ್ರಕರಣ ಗಮನಕ್ಕೆ ಬಂದಿವೆ. ಆದರೂ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ.
25 ಲಕ್ಷ ರೂಪಾಯಿ ವಂಚನೆ ಪ್ರಕರಣ: ಭಾರತ ಪೇ ಪಿಓಎಸ್ ಮಷೀನ್ ಫ್ಯಾಬ್ರಿಕೇಶನ್ ವ್ಯವಹಾರಕ್ಕೆ ಹಣ ಬೇಕಾಗಿದೆ. ಅದರ ಚಾರ್ಜ್ ಕೊಡುತ್ತೇವೆ ಎಂದು ನಂಬಿಸಿ ಯಂತ್ರ ದುರುಪಯೋಗಪಡಿಸಿಕೊಂಡು 25 ಲಕ್ಷಕ್ಕೂ ಅಧಿಕ ಅನಧಿಕೃತ ವ್ಯವಹಾರ ಮಾಡಿ ಮೋಸ ಮಾಡಲಾಗಿದೆ ಎಂದು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇ ಹುಬ್ಬಳ್ಳಿಯ ಇಂದ್ರಪ್ರಸ್ಥ ನಗರದ ವಾಸಿಂ ಅಹ್ಮದ್ ಖಾಜಿ ಎಂಬುವವರೇ ಮೋಸ ಹೋದ ಸಂತ್ರಸ್ತ. ವಿಶಾಲ ನಗರದ ಇಮ್ರಾನ್ ಖಾನ್, ಹಳೆಯ ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್ ನಿವಾಸಿ ಖಾಸಿಂ ಲಷ್ಕರ್, ಹಾವೇರಿ ತಡಸ ನಿವಾಸಿ ಅಲ್ತಾಫ್ ಮತ್ತು ಗೋವಾದ ಜಾವೇದ್ ಅವರು ವಾಸಿಂ ಖಾಜಿಯವರನ್ನು ಸಂಪರ್ಕಿಸಿ ಫ್ಯಾಬ್ರಿಕೇಶನ್ ವ್ಯವಹಾರಕ್ಕೆ ಭಾರತಪೇ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರ ಪಡೆದುಕೊಂಡಿದ್ದರು. ಅದರ ಮೂಲಕ ನ.8 ರಿಂದ 20 ರವರೆಗೆ 25 ಲಕ್ಷಕ್ಕಿಂತಲೂ ಹೆಚ್ಚು ಅನಧಿಕೃತ ವ್ಯವಹಾರ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದ ತನಿಖೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: ಮುಂಬೈ ಏರ್‌ಪೋರ್ಟ್ ಟರ್ಮಿನಲ್ 2ಗೆ ಸ್ಫೋಟ ಬೆದರಿಕೆ; ಬಿಟ್‌ಕಾಯಿನ್ ರೂಪದಲ್ಲಿ $1 ಮಿಲಿಯನ್‌ಗೆ ಬೇಡಿಕೆ