ಧಾರವಾಡ: ತಾಲೂಕಿನ ಲೋಕೂರ ಹಾಗೂ ಶಿಬಾರಗಟ್ಟಿ ಗ್ರಾಮಗಳಲ್ಲಿ ಸಾರ್ವಜನಿಕ ಶೌಚಾಲಯ ಬಳಕೆ, ವೈಯಕ್ತಿಕ ಶುಚಿತ್ವ, ಪ್ಲಾಸ್ಟಿಕ್ ತ್ಯಾಜ್ಯವಿಲ್ಲದ ಹಸಿ ಕಸ, ಒಣ ಕಸ ವಿಂಗಡಣೆ ಮೊದಲಾದ ಚಟುವಟಿಕೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.
2012ರ ಬೇಸ್ ಲೈನ್ ಸಮೀಕ್ಷೆ ಪ್ರಕಾರ ಈ ಎರಡೂ ಗ್ರಾಮಗಳಲ್ಲಿ 644 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಸಮೀಕ್ಷೆಯಿಂದ ಹೊರಗುಳಿದಿದ್ದ 138 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಕಾಮಗಾರಿ ಆದೇಶ ನೀಡಲಾಗಿದೆ. ಇವುಗಳಲ್ಲಿ 117 ಶೌಚಾಲಯಗಳು ನಿರ್ಮಾಣವಾಗಿದ್ದು, ಸಹಾಯಧನ ಪಾವತಿಸಲಾಗಿದೆ. ಶೌಚಾಲಯ ಹೊಂದದೇ ಇರುವ 48 ಕುಟುಂಬಗಳು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿವೆ.
ಇನ್ನು ಈ ಕುಟುಂಬಗಳ ಪಟ್ಟಿಯನ್ನು ಖಜಾನೆ 2ರಲ್ಲಿ ಸೇರಿಸಲು ತಾಲೂಕು ಪಂಚಾಯಿತಿಗೆ ಕಳಿಸಲಾಗಿದೆ. ಶೌಚಾಲಯ ಹೊಂದದೇ ಇರುವ ಕುಟುಂಬಗಳು ಗ್ರಾಮದಲ್ಲಿರುವ ಸಾಮೂಹಿಕ ಶೌಚಾಲಯ ಸ್ವಚ್ಛಗೊಳಿಸಿ ಬಳಸಲು ಅರಿವು ಮೂಡಿಸಲಾಯಿತು.
ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಮಿಷನ್ ಯೋಜನೆಯ ಸಂಯೋಜಕಿ ಪದ್ಮಾವತಿ ನಾಗನಗೌಡರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.