ಹುಬ್ಬಳ್ಳಿ : ನೆರೆ ಸಂತ್ರಸ್ತರಿಗೆ ಆಸರೆಯಾಗಲು ಹೆಚ್ಚುವರಿ ನೆರವು ಒದಗಿಸಲು ಜಿಲ್ಲಾಡಳಿತದಿಂದ 33,852 ಆಹಾರ ಧಾನ್ಯಗಳ ಕಿಟ್ ಗಳನ್ನು ಪೂರೈಸಲಾಗುತ್ತಿದೆ.
ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಆವರಣದ ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಪೊಟ್ಟಣಗಳನ್ನು ತಯಾರಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ಬೇಡಿಕೆಗಳಿಗೆ ಅನುಸಾರವಾಗಿ ಜಿಲ್ಲೆಯ ತಾಲೂಕುಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಪ್ರಕೃತಿ ವಿಕೋಪಕ್ಕೆ ಒಳಗಾದ ಸಂತ್ರಸ್ತರಿಗೆ ನೀಡುತ್ತಿರುವ ವಿಶೇಷ ಆಹಾರ ಕಿಟ್ ಒಂದರಲ್ಲಿ 10 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಅಯೋಡಿನ್ ಯುಕ್ತ ಉಪ್ಪು, 1ಲೀಟರ್ ತಾಳೆ ಎಣ್ಣೆ ಹಾಗೂ ಪ್ರತ್ಯೇಕವಾಗಿ 5 ಲೀಟರ್ ಸೀಮೆ ಎಣ್ಣೆಯ ಕ್ಯಾನ್ ಇರುತ್ತದೆ.
ಪೊಟ್ಟಣ ತಯಾರಿಕೆ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಹಾಗೂ ಕರ್ನಾಟಕ ಆಹಾರ ಸರಬರಾಜು ನಿಗಮದ ವ್ಯವಸ್ಥಾಪಕಿ ರಾಜಶ್ರೀ ಜೈನಾಪುರ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ 80 ಕ್ಕೂ ಹೆಚ್ಚು ಕಾರ್ಮಿಕರು ಆಹಾರ ಧಾನ್ಯಗಳ ಕಿಟ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲೂಕಾವಾರು ಬೇಡಿಕೆ:
ಧಾರವಾಡ 6,635, ಹುಬ್ಬಳ್ಳಿ ಶಹರ 7,200, ಹುಬ್ಬಳ್ಳಿ ಗ್ರಾಮೀಣ 6,151, ಕಲಘಟಗಿ 1,875, ನವಲಗುಂದ 3,995, ಅಳ್ನಾವರ 2,300, ಕುಂದಗೋಳ 4,692, ಅಣ್ಣಿಗೇರಿ 1,304 ಸೇರಿ ಒಟ್ಟು 33,852 ಆಹಾರ ಕಿಟ್ ಗಳ ಬೇಡಿಕೆ ಸಲ್ಲಿಕೆಯಾಗಿತ್ತು. 350 ಮೆಟ್ರಿಕ್ ಟನ್ ಅಕ್ಕಿಯನ್ನು ಆಹಾರ ನಿಗಮದ ಉಗ್ರಾಣದಿಂದ ಪಡೆಯಲಾಗಿದೆ. ಉಳಿದಂತೆ ಟೆಂಡರ್ ಆಹ್ವಾನಿಸಿ 350 ಕ್ವಿಂಟಾಲ್ ತೊಗರಿ ಬೇಳೆ, 350 ಕ್ವಿಂಟಾಲ್ ಸಕ್ಕರೆ, 350 ಕ್ವಿಂಟಾಲ್ ಉಪ್ಪನ್ನು ಖರೀದಿಸಲಾಗಿದೆ. ಕರ್ನಾಟಕ ಬೀಜ ನಿಗಮದಿಂದ 35,000 ಲೀಟರ್ ತಾಳೆ ಎಣ್ಣೆ ಖರೀದಿಸಲಾಗಿದೆ. ಕಳೆದ ಎಂಟು ದಿನಗಳಿಂದ ಪ್ಯಾಕಿಂಗ್ ಕಾರ್ಯ ನಡೆಯುತ್ತಿದೆ.
ಸುಮಾರು 1,70,000 ಲೀಟರ್ ಸೀಮೆಯಣ್ಣೆಯನ್ನು ತಲಾ 5 ಲೀಟರ್ ಕ್ಯಾನ್ಗಳ ಮೂಲಕ ವಿತರಿಸಲಾಗುತ್ತಿದೆ. ಇದಕ್ಕಾಗಿ 392 ಮಾರ್ಗಗಳನ್ನು ಗುರುತಿಸಲಾಗಿದೆ. ಈಗಾಗಲೇ 5,130 ಕಿಟ್ ಗಳನ್ನು ಪೂರೈಸಲಾಗಿದೆ. ಇವುಗಳನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಂತ್ರಸ್ತರಿಗೆ ವಿತರಿಸಲಿದ್ದಾರೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಹೇಳಿದರು.