ಹುಬ್ಬಳ್ಳಿ : ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ 45 ವರ್ಷದ ಕೋವಿಡ್ ಸೋಂಕಿತ ಮಹಿಳೆಯೊಬ್ಬಳಿಗೆ ಯಶಸ್ವಿಯಾಗಿ ಕರುಳು ಶಸ್ತ್ರಚಿಕಿತ್ಸೆ ನೀಡುವ ಮೂಲಕ ಸಾವಿನ ದವಡೆಯಿಂದ ಪಾರು ಮಾಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆ ಸಿಬ್ಬಂದಿಗೆ ಇದೊಂದು ವಿಶೇಷ ಪ್ರಕರಣವಾಗಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಕೊಪ್ಪಳದ ಜಿಲ್ಲಾಸ್ಪತ್ರೆಯಿಂದ ಕಿಮ್ಸ್ಗೆ ರವಾನಿಸಲಾಗಿತ್ತು. ಈ ವೇಳೆ, ಮಹಿಳೆಯ ಕೊರೊನಾ ಪರೀಕ್ಷೆ ನಡೆಸಿದಾಗ ಕೋವಿಡ್ ಇರುವುದು ಪತ್ತೆಯಾಗಿತ್ತು. ಮಹಿಳೆಯ ಸಣ್ಣ ಕರುಳಿಗೆ ರಕ್ತ ಸಂಚಾರ ಮಾಡುವ ನರಗಳು ಹಾನಿಯಾಗಿದ್ದು, ಸಣ್ಣ ಕರುಳು ಗ್ಯಾಂಗ್ರೀನ್ಗೆ ತುತ್ತಾಗಿತ್ತು.
ಈ ಸಣ್ಣ ಕರುಳಿನ ಭಾಗವನನ್ನು ಕತ್ತರಿಸಿ ತೆಗೆದು ಹಾಕಲಾಗಿದೆ. ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿದ್ದು, ಮಹಿಳೆ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. ಕಿಮ್ಸ್ನ ಶಸ್ತ್ರಚಿಕಿತ್ಸಾ ವಿಭಾಗದ ಡಾ.ವಿನಾಯಕ ಬ್ಯಾಟಪ್ಪನವರ್ ಶಸ್ತ್ರಚಿಕಿತ್ಸೆ ನಡೆಸಿದ್ದು, ವಿಭಾಗದ ಮುಖ್ಯಸ್ಥ ಡಾ. ಗುರುಶಾಂತಪ್ಪ ಯಲಗಟ್ಟಿ, ಡಾ. ರಮೇಶ್ ಹೊಸಮನಿ, ಡಾ.ವಿಜಯ್ ಕಾಮತ್ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿರುವುದಾಗಿ ಡಾ. ರಾಮಲಿಂಗಪ್ಪ ಶಸ್ತ್ರಚಿಕಿತ್ಸಾ ವಿಭಾಗದ ತಂಡವನ್ನು ಅಭಿನಂದಿಸಿದ್ದಾರೆ.