ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸಲು ಇನ್ನೊಂದು ವಾರ ಸಮಯವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಬಿರುಸಿನ ಮತಬೇಟೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯದ ಮೂರು ಕಡೆಗಳಲ್ಲಿ ಮಹಾಯುತಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ವಿದರ್ಭದ ಚಿಮುರ್ನಲ್ಲಿ ಪ್ರಚಾರ ನಡೆಸಲಿರುವ ಮೋದಿ, ಸಂಜೆ 4.15ಕ್ಕೆ ಸೋಲಾಪುರ್, ಸಂಜೆ 6.30ಕ್ಕೆ ಪುಣೆಯಲ್ಲಿ ಆಯೋಜಿಸಲಾದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದಲ್ಲಿ 70 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಎನ್ಸಿಪಿ-ಕಾಂಗ್ರೆಸ್ ಬಿಗಿಹಿಡಿತವಿದೆ. ಬಿಜೆಪಿ ತಳಮಟ್ಟದಿಂದ ಪಕ್ಷದೊಳಗಿನ ಬಿರುಕು ನಿವಾರಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ ಪ್ರಚಾರವನ್ನು ಎದುರು ನೋಡುತ್ತಿದೆ.
ವಿದರ್ಭ ಕೂಡ ಕಾಂಗ್ರೆಸ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿದ್ದು, ಇಲ್ಲಿರುವ 76 ಕ್ಷೇತ್ರಗಳ ಪೈಕಿ 36ರಲ್ಲಿ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದೆ. ಈ ಪ್ರದೇಶಗಳು ಬಿಜೆಪಿಯ ಲೆಕ್ಕಾಚಾರದ ಪ್ರಮುಖ ಪ್ರದೇಶಗಳಾಗಿದ್ದು, ಈಗಾಗಲೇ ಪ್ರಧಾನಿ ಮೋದಿ ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 5ರಂದು ಇಲ್ಲಿಗೆ ಭೇಟಿ ನೀಡಿದ್ದರು. ಈ ಎರಡೂ ಭೇಟಿಯಲ್ಲೂ ಅವರು ಕೃಷಿ, ಜವಳಿ ಮತ್ತು ಒಬಿಸಿಗೆ ಪ್ರಾಮುಖ್ಯತೆ ನೀಡಿದ್ದರು.
ಈ ಪ್ರದೇಶದಲ್ಲಿ 10 ಸಂಸತ್ ಸ್ಥಾನಗಳಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲಿ ಜಯಗಳಿಸಿತ್ತು.
ರಾಹುಲ್ ಗಾಂಧಿ ಪ್ರಚಾರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ರಾಜ್ಯದಲ್ಲಿ ಮತ ಪ್ರಚಾರ ನಡೆಸಲಿದ್ದಾರೆ. ಬುಲ್ಧಾನಾ ಜಿಲ್ಲೆಯ ಚಿಖ್ಲಿ ಮತ್ತು ಗೊಂಡಿಯಾದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ನವೆಂಬರ್ 13, 14, 16, 17 ಮತ್ತು 18ರಂದು ಪ್ರಚಾರ ಸಭೆಗಳಲ್ಲಿ ಭಾಗಿಯಾಗುವರು.
ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಯೊಂದಿಗೆ ಕಾಂಗ್ರೆಸ್, ಶಿವಸೇನಾ (ಯುಬಿಟಿ) ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎಸ್ಪಿ) ಸ್ಪರ್ಧಿಸುತ್ತಿದೆ.
ನವೆಂಬರ್ 20ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. (ಐಎಎನ್ಎಸ್)
ಇದನ್ನೂ ಓದಿ: ಜಾರ್ಖಂಡ್ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ: ನ.13 ರಂದು ಮೊದಲ ಹಂತದ ಮತದಾನ