ಹುಬ್ಬಳ್ಳಿ: ಭಾರತ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಅತೀ ಗಂಡಾಂತರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಹಾಗೂ ಅದಕ್ಕೆ ಬೆಂಬಲವಾಗಿರುವ ಎನ್ಡಿಎ ಹಾಗೂ ಬಿಜೆಪಿ ತತ್ತ್ವ ಆದರ್ಶಗಳು ಪ್ರಜಾಪ್ರಭುತ್ವದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿವೆ ಎಂದು ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠ ತಿಳಿಸಿದರು.
ಇದೇ 31ರಂದು ಪ್ರಜಾಪ್ರಭುತ್ವದ ಬಿಕ್ಕಟ್ಟು ಸಂಕಲ್ಪ ಸಭೆಯನ್ನು ಧಾರವಾಡ ಆಯೋಜಿಸಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ನಗರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಗಂಡಾಂತರದಲ್ಲಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಅದಕ್ಕೆ ಬೆಂಬಲ ನೀಡುತ್ತಿರುವ ಬಿಜೆಪಿ ಹಾಗೂ ಎನ್.ಡಿ.ಎ ಪಕ್ಷಗಳು ಮೂಲ ಕಾರಣವಾಗಿದೆ. ಅಲ್ಲದೇ ಪಕ್ಷ ಸಿದ್ಧಾಂತಗಳ ಪರಿಪಾಲನೆಯಿಂದ ದೇಶದ ಪ್ರಜಾಪ್ರಭುತ್ವದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಈ ಹಿಂದೆ 1977ರಲ್ಲಿ ನಮ್ಮ ದೇಶದ ನಾಗರಿಕ ಸಮಾಜ ನಿರ್ವಹಿಸಿದಂತೆ ಮತ್ತೊಮ್ಮೆ ಅಂತಹ ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಗಂಭೀರ ಕರೆಯಾಗಿದೆ ಎಂದರು.
ಕೇಂದ್ರ ಸರ್ಕಾರದ ಮೂಲಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನರೇಂದ್ರ ಮೋದಿಯು ಅದಾನಿ ಅಂಬಾನಿ ಜೊತೆ ಸೇರಿ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ಕೈ ಜೋಡಿಸುವ ಮೂಲಕ ಹಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಪ್ರಜಾಪ್ರಭುತ್ವ ಬಿಕ್ಕಟ್ಟು ನಿಯಂತ್ರಿಸುವ ಸದುದ್ದೇಶದಿಂದ ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಯಿಂದ ಗಂಭೀರ ಮಂಥನ ಒಳಗೊಂಡ ಸಂಕಲ್ಪ ಸಭೆ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಾಹಿತಿಗಳು, ಸಾಮಾಜಿಕ ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಲಿದ್ದಾರೆ ಎಂದು ಅವರು ಈ ಕುರಿತು ಮಾಹಿತಿ ನೀಡಿದರು.