ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ ಪ್ರಮುಖ ಇಲಾಖೆಗಳಲ್ಲಿ ಒಂದು. ಅದರಲ್ಲೂ ಉತ್ತರ ಕರ್ನಾಟಕಕ್ಕೆ ವಿಶೇಷ ಒತ್ತು ನೀಡುವ ಅಗತ್ಯ ಇದೆ. ಈ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳ ಬೆಳವಣಿಗೆಗೆ ನಿರೀಕ್ಷೆ ಮಟ್ಟದಲ್ಲಿ ಆದ್ಯತೆ ಸಿಕ್ಕಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಯಲ್ಲಮ್ಮನ ಗುಡ್ಡ, ಬನಶಂಕರಿ ಮತ್ತು ಹುಲಿಗೆಮ್ಮ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಈ ಶ್ರದ್ಧಾ ಕೇಂದ್ರಗಳು ಪ್ರವಾಸಿ ತಾಣಗಳ ರೀತಿಯಲ್ಲೇ ಇವೆ. ಅವುಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ತಿಳಿಸಿದರು. ಶಾಸಕರ ಸೇವಾ ತಂಡ ಸ್ಥಾಪನೆ ಕುರಿತು ಮಾತನಾಡಿ, ಸೇವಾ ತಂಡವನ್ನು ಗದಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡಿದ್ದೇನೆ. ಈ ಸೇವಾ ತಂಡವನ್ನು ನೋಂದಣಿ ಮಾಡಿ ಸಾಂಸ್ಥಿಕ ರೂಪವನ್ನು ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : Congress Guarantee Scheme.. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಜಾರಿಯಲ್ಲಿ ಗೊಂದಲವಿಲ್ಲ: ಸಿಎಂ ಸಿದ್ದರಾಮಯ್ಯ
ಗೋಹತ್ಯೆ ನಿಷೇಧ, ಬಜರಂಗದಳ ನಿಷೇಧಕ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಚರ್ಚೆಗಳು ಅನವಶ್ಯಕ. ಸರ್ಕಾರದ ಎದುರು ಈ ರೀತಿಯ ಯಾವುದೇ ಪ್ರಸ್ತಾವನೆಗಳು ಇಲ್ಲ. ಇಂತಹ ಚರ್ಚೆಗಳಿಗೆ ಮಹತ್ವ ಇಲ್ಲ, ಯಾರೇ ಈ ಬಗ್ಗೆ ಹೇಳಿದರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಶಾಂತಿ, ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಜನಸಾಮಾನ್ಯರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಕಾನೂನು ರೂಪಿಸಲಾಗುವುದು. ಸಮಾಜ ಸುಧಾರಣೆ, ಆಡಳಿತದಲ್ಲಿ ಶಿಸ್ತು ತರುವುದು, ಜನಕಲ್ಯಾಣದ ದೃಷ್ಟಿಯಿಂದ ಮೊದಲ ಅಧಿವೇಶನದಲ್ಲಿ ಕೆಲವು ಕಾನೂನುಗಳನ್ನು ಜಾರಿಗೆ ತರಲಾಗುವುದು ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.
ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಸಂಬಂಧ ರೈತರು ಮನವಿ ಸಲ್ಲಿಸಿರುವ ಬಗ್ಗೆ ಮಾತನಾಡಿದ ಅವರು, ಈ ಸಂಬಂಧ ಸಚಿವ ಶಿವಾನಂದ ಪಾಟೀಲ್ ಜೊತೆ ಸಮಾಲೋಚನೆ ನಡೆಸಲಾಗಿದೆ. ಎಪಿಎಂಸಿ ಕಾಯ್ದೆಗಳನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಇನ್ನು ಒಂದು ವಾರದ ಒಳಗೆ ದೃಢ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದ ಮಾಮ್ಲೆ ದೇಸಾಯಿ, ಕೆ.ಎಚ್. ಪಾಟೀಲ, ಎಂ ಆರ್ ಪಾಟೀಲ, ಬಿ.ಜಿ. ಬಣಕಾರ ಅವರು ಎಪಿಎಂಸಿಗಳ ಆರಂಭಕ್ಕೆ ವಿಶೇಷ ಪ್ರಯತ್ನ ಮಾಡಿದ್ದರು. ರೈತರ ಶೋಷಣೆ ತಡೆಗಟ್ಟುವ ಕೆಲಸ ಮಾಡಿದ್ದರು. ಅವರ ಕನಸಿಗೆ ಧಕ್ಕೆ ತರುವ ಯಾವುದೇ ಕಾನೂನುಗಳನ್ನು ತೆಗೆದು ಹಾಕಲಾಗುವುದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ : Jagadish Shettar: ರಾಜ್ಯದಲ್ಲಿ ಈಗ ಬಿಜೆಪಿ ವರ್ಸಸ್ ಬಿಜೆಪಿ ಪರಿಸ್ಥಿತಿ- ಜಗದೀಶ್ ಶೆಟ್ಟರ್ ವ್ಯಂಗ್ಯ