ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ವಾ.ಕ.ರ.ಸಾ. ಸಂಸ್ಥೆಯು ವಿಭಾಗದ ವ್ಯಾಪ್ತಿಯ ಬಸ್ಗಳಿಗೆ ಸೋಡಿಯಂ ಹೈಪೊಕ್ಲೋರೈಡ್ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಿದೆ.
ಕೋವಿಡ್ ಅನ್ಲಾಕ್ 5.0 ಜಾರಿಯಾದ ನಂತರ ನಿರ್ಬಂಧಗಳು ಮತ್ತಷ್ಟು ಸಡಿಲಗೊಂಡಿವೆ. ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಜನರ ಓಡಾಟ ಹೆಚ್ಚಾಗುತ್ತಿದೆ. ಲಾಕ್ಡೌನ್ ಪೂರ್ವದಲ್ಲಿ ಇದ್ದಂತೆ ಜಿಲ್ಲೆಯೊಳಗೆ, ಗ್ರಾಮೀಣ ಪ್ರದೇಶಗಳಿಗೆ, ಹೊರ ಜಿಲ್ಲೆಗಳಿಗೆ ಮತ್ತು ನೆರೆಯ ರಾಜ್ಯಗಳಿಗೆ ಎಲ್ಲಾ ಮಾದರಿಯ ಬಸ್ಸುಗಳು ಸಂಚರಿಸುತ್ತಿವೆ.
ಆರು ತಿಂಗಳ ನಂತರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುತ್ತಿದೆ. ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ, ಬಸ್ಗಳ ಕಾರ್ಯಾಚರಣೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಸ್ ನಿಲ್ದಾಣ ಮತ್ತು ಬಸ್ನಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ನಿರ್ದಿಷ್ಟ ಪ್ರಯಾಣಿಕರನ್ನು ಮಾತ್ರ ಅನುಮತಿಸಲಾಗುತ್ತದೆ. ಬಸ್ ಪ್ರಯಾಣ ಅತ್ಯಂತ ಸುರಕ್ಷಿತವಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಸಂಸ್ಥೆಯ ಬಸ್ಗಳಲ್ಲಿ ನಿರ್ಭೀತಿಯಿಂದ ಪ್ರಯಾಣಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡ ತಿಳಿಸಿದ್ದಾರೆ.