ಹುಬ್ಬಳ್ಳಿ: ಕೋವಿಡ್-19 ತಡೆಗಟ್ಟಲು ಲಾಕ್ಡೌನ್ ವಿಧಿಸಲಾಗಿದ್ದು, ಇದರಿಂದ ಬಡ ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರು ಮನೆಯಲ್ಲಿಯೇ ಇರಬೇಕಾಗಿದೆ. ಹಾಗಾಗಿ ಹಸಿದವರ ಹೊಟ್ಟೆ ತುಂಬಿಸಲು ಸಾಕಷ್ಟು ದಾನಿಗಳು ಮುಂದೆ ಬರುತ್ತಿದ್ದಾರೆ. ಆದರೆ ಜಿಲ್ಲಾಡಳಿತದ ಮನವಿ ಮೇರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾಡಳಿತ, ಆಹಾರ ಹಾಗೂ ದಿನನಿತ್ಯ ಬೇಕಾಗುವ ಅಗತ್ಯ ವಸ್ತುಗಳನ್ನು ಒದಗಿಸಿದಂತೆ ಆದೇಶ ನೀಡಿದೆ.
ಈ ಹಿನ್ನೆ್ಲೆ ನಗರದ ಬಸವರಾಜ ಅಮ್ಮಿನಭಾವಿ ಎಂಬುವವರು ಅಗತ್ಯ ವಸ್ತುಗಳನ್ನು ಮನೆ ಮನೆಗೆ ಹೋಗಿ ಒದಗಿಸುವ ಬದಲು, ಸ್ವತಃ ತಾವೇ ಮನೆಯಲ್ಲಿ 5 ಕೆಜಿ ಅಕ್ಕಿ, ತೊಗರಿ ಬೇಳೆ, ಸಕ್ಕರೆ, ಅವಲಕ್ಕಿ, ಅಡುಗೆಗೆ ಉಪಯೋಗಿಸುವ ಎಣ್ಣೆ, ಚಹಾ ಪುಡಿ, ರವಾ, ಈರುಳ್ಳಿ ಸೇರಿದಂತೆ 9 ವಿಧದ ಆಹಾರ ಪದಾರ್ಥಗಳ ಪ್ಯಾಕೇಟ್ಗಳನ್ನು ಇಟ್ಟಿದ್ದಾರೆ. ಹೀಗಾಗಿ ಅಗತ್ಯ ವಸ್ತುಗಳು ಬೇಕಾದವರು ಮಯೂರ ಎಸ್ಟೇಟ್ ಬಳಿ ಇರುವ ಬಸವರಾಜ ಅಮ್ಮಿನಭಾವಿ ಅವರ ಮನೆಯಲ್ಲಿ ಪಡೆಯುವಂತೆ ಹೇಳಿದ್ದಾರೆ.
ಇನ್ನು ಪ್ರತಿಯೊಂದು ಬಡಾವಣೆಗೆ ಹೋಗಿ ಆಹಾರ ಪದಾರ್ಥಗಳ ಕಿಟ್ಗಳನ್ನು ಒದಗಿಸುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ. ಅದರ ಜೊತೆ ಜಿಲ್ಲಾಡಳಿತದ ಆದೇಶದಂತೆ ಆಹಾರ ಪದಾರ್ಥಗಳ ಪ್ಯಾಕೇಟ್ಗಳನ್ನು ಪಡೆದವರ ವಿಡಿಯೋ ಆಗಲಿ, ಭಾವಚಿತ್ರವಾಗಲಿ ನಾವು ತಗೆದುಕೊಳ್ಳದಿರಲು ನಿರ್ಧರಿಸಿದ್ದು, ಇದೊಂದು ನಮ್ಮಿಂದ ಸಮಾಜಕ್ಕೆ ನೀಡುವ ಕಿರು ಕಾಣಿಕೆ ಎಂದಿದ್ದಾರೆ.