ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ದೇಶವನ್ನು ಸ್ವತಂತ್ರಗೊಳಿಸಿದ ವೀರರಾದ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರಿಡುವ ಮೂಲಕ ಗೌರವ ಸಲ್ಲಿಸಬೇಕು ಎಂದರು.
ಎರಡೂ ವಿಮಾನ ನಿಲ್ದಾಣಗಳಿಗೆ ಮಹಾಪುರುಷರ ಹೆಸರನ್ನು ನಾಮಕರಣ ಮಾಡಬೇಕೆಂಬುದು ಮಠ ಮಾನ್ಯಗಳು, ವಿವಿಧ ಸಂಘಟನೆ ಹಾಗೂ ಸಮಸ್ತ ಕನ್ನಡಿಗರ ಬೇಡಿಕೆಯಾಗಿದ್ದು, ಪ್ರಸ್ತಾವನೆ ಕೂಡ ಕೇಂದ್ರ ಸರ್ಕಾರದ ಮುಂದಿದೆ. ಕೂಡಲೇ ಪ್ರಸ್ತಾವನೆ ಪರಿಶೀಲಿಸಿ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು ಎಂದು ಶಿವಾನಂದ ಮುತ್ತಣ್ಣನವರ ಆಗ್ರಹಿಸಿದ್ರು.
ಡಿಸಿಎಂ ಲಕ್ಷ್ಮಣ ಸವದಿಯವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಮಕರಣ ಮಾಡಲು ಅಡ್ಡಿ ಮಾಡಿದರೆ ಅವರ ಮನೆ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ರು. ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ದಾರೂಢರ ಹೆಸರಿಡಲು ಕ್ರಮ ಕೈಗೊಂಡಿರುವ ಸಚಿವ ಸುರೇಶ ಅಂಗಡಿಯವರ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದರು.
ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲು ನಾಳೆ ಬೆಳಿಗ್ಗೆ 10 ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದ್ರು.
ಪತ್ರಿಕಾಗೋಷ್ಠಿಯಲ್ಲಿ ಹನುಮಂತಪ್ಪ ತಿಪ್ಪಣ್ಣವರ, ಮಲ್ಲಿಕಾರ್ಜುನ ತಾಲೂರ, ಯಲ್ಲಪ್ಪ ಕುಂದಗೋಳ ಸೇರಿದಂತೆ ಇತರರಿದ್ದರು.