ಹುಬ್ಬಳ್ಳಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದ್ದು ಹಾಗೂ ಇನ್ನಿತರ ಕಾರಣಗಳಿಂದ ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸೋದು ಬೇಡ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಪರ್ಧೆ ಬಿಟ್ಟು ಪಕ್ಷ ಬಲಪಡಿಸಲಿ: ಸಿದ್ದರಾಮಯ್ಯ ಅವರು ಪಕ್ಷ ಬಲಪಡಿಸುವ ಕೆಲಸ ಮಾಡಲಿ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ, ಅಲ್ಲಿಗೆ ಸೀಮಿತ ಆಗೋದು ಬೇಡ. ಸಿದ್ಧರಾಮಯ್ಯ ಕೋಲಾರ ಮತ್ತಿತರ ಕಡೆ ಸ್ಪರ್ಧಿಸ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಆದರೆ, ಸಿದ್ಧರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದು ಬರ್ತಾರೆ. ಆದರೆ ಚುನಾವಣೆ ಸ್ಪರ್ಧಿಸಿದಾಗ ಆ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತೆ. ಇಡೀ ರಾಜ್ಯ ಸುತ್ತಬೇಕಾಗಿರುವುದರಿಂದ ಅವರು ಸ್ಪರ್ಧಿಸದಿರೋದು ಒಳ್ಳೆಯದು ಎಂದು ಹೇಳಿದರು.
ಇಬ್ಬರು ನಾಯಕರ ಪ್ರಚಾರದಿಂದ ಲಾಭ: ಸಿದ್ದರಾಮಯ್ಯ ಸ್ಪರ್ಧಿಸದೇ ಇರೋದ್ರಿಂದ ಕಾಂಗ್ರೆಸ್ ಗೆ ಹೆಚ್ಚು ಲಾಭವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದು ಬೇಡ. ಅವರು ಸಹ ರಾಜ್ಯ ಸುತ್ತಾಡಿ ಪ್ರಚಾರದಲ್ಲಿ ತೊಡಗಿಸಿಕೊಂಡ್ರೆ ಪಕ್ಷಕ್ಕೆ ಒಳ್ಳೆಯದು.
ಇಬ್ಬರು ನಾಯಕರು ಚುನಾವಣೆ ಸ್ಪರ್ಧಿಸದಿದ್ದರೆ ಪಕ್ಷವೂ ಅಧಿಕಾರ ಸುಲಭವಾಗಿ ಹಿಡಿಯಲು ಸಾಧ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ಪರ್ಧಿಸದೆಯೋ ಅಧಿಕಾರ ಪಡೆಯಬಹುದು ಎಂದರು.
ಟಿಕೆಟ್ ಸಿಗದಿದ್ದರೆ ಬಿಜೆಪಿ ಸೇರಲ್ಲ:ಕಲಘಟಗಿ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ವಿಚಾರವಾಗಿ ಮಾತನಾಡಿದ ಸಂತೋಷ ಲಾಡ್, ನಾಗರಾಜ ಛಬ್ಬಿ ಮತ್ತು ನಾನು ಒಳ್ಳೆಯ ಸ್ನೇಹಿತರು. ಕ್ಷೇತ್ರದಲ್ಲಿ ಅವರು ಕುಕ್ಕರ್ ಹಂಚುತ್ತಿದ್ದಾರೆ ಅನ್ನೊ ವಿಷಯ ಗೊತ್ತಾಗಿದೆ. ಅವರ ಕುಕ್ಕರ್ಗಾಗಿ ನಾನೂ ಸಹ ಕಾಯುತ್ತಿದ್ದೇನೆ. ಅವರ ಹೇಳಿಕೆಯಿಂದ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಯಾಗಿರೋದು ಸತ್ಯ. ಕಾಂಗ್ರೆಸ್ ಟಿಕೆಟ್ ಸಿಗದಿದ್ದಲ್ಲಿ ನಾನು ಬಿಜೆಪಿ ಸೇರಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಇರ್ತೇನೆ. ಕಾಂಗ್ರೆಸ್ ನಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸ್ತೇನೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಜೆಡಿಎಸ್ ಚುನಾವಣಾ ರಣಕಹಳೆ: ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಜೊತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಹೆಚ್ಡಿಕೆ