ಹುಬ್ಬಳ್ಳಿ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸೋಂಕು ನಿಯಂತ್ರಣಕ್ಕೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಆಕ್ಸಿಜನ್ ಬೆಡ್, ಐಸಿಯು ಬೆಡ್ ಸಿಗ್ತಿಲ್ಲ. ಇದರಿಂದ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಚಾಮರಾಜನಗರದ ಸಾವಿನ ಅಂಕಿಅಂಶದಲ್ಲಿ ಮೊದಲು ಸುಳ್ಳು ಹೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟ ಸಚಿವರು ಏಕೆ ಸುಳ್ಳು ಹೇಳಿದ್ರು?, ಎಲ್ಲಾ ಕಡೆ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ ಎಂದು ದೂರಿದರು.
'ಬಿಜೆಪಿಯಲ್ಲಿ ಬೀದಿ ಕಾಳಗ ನಡೆಯುತ್ತಿದೆ'
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾರ ಮೇಲೂ ಪ್ರೀತಿ ಇಲ್ಲ, ರಾಜಕೀಯ ದ್ವೇಷವಿಲ್ಲ. ವೈಯಕ್ತಿಕವಾಗಿ ನನಗೆ ಯಡಿಯೂರಪ್ಪ ಅವರ ಮೇಲೆ ಪ್ರೀತಿ ಇದೆ. ಆದ್ರೆ ಯಡಿಯೂರಪ್ಪ ಸಿಎಂ ಆಗಿ ಕೆಲಸ ಮಾಡುವಲ್ಲಿ ವಿಫಲ ಆಗಿದ್ದಾರೆ. ಬಿಜೆಪಿಯಲ್ಲಿ ಬೀದಿ ಕಾಳಗ ನಡೆಯುತ್ತಿದೆ. ಮುಖ್ಯಮಂತ್ರಿ ಆಗುವ ಸಮರ್ಥ ವ್ಯಕ್ತಿ ಬಿಜೆಪಿಯಲ್ಲಿ ಇಲ್ಲ ಎಂದು ಕುಟುಕಿದರು.
'ಬೊಮ್ಮಾಯಿ ರಾಜೀನಾಮೆ ನೀಡಲಿ'
ರೇಪ್ ಕೇಸ್‌ನಲ್ಲಿ ಅರೆಸ್ಟ್ ಮಾಡದೆ ಇರೋ ಪ್ರಕರಣ ಅಂದ್ರೆ ಅದು ಜಾರಕಿಹೊಳಿ ಪ್ರಕರಣ. ಗೃಹ ಸಚಿವರು ಜಾರಕಿಹೊಳಿಯನ್ನು ರಕ್ಷಣೆ ಮಾಡ್ತಾ ಇದ್ದಾರೆ. ಒಬ್ಬ ಆರೋಪಿ ಗೃಹ ಸಚಿವರನ್ನು ಭೇಟಿ ಮಾಡ್ತಾ ಇದ್ದಾರೆ ಎಂದ್ರೆ ಏನು ಅರ್ಥ? ಹೀಗಾಗಿ ಗೃಹ ಸಚಿವ ಬೊಮ್ಮಾಯಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
'ರಮೇಶ್ ಜಾರಕಿಹೊಳಿಯನ್ನು ಬಂಧಿಸಿ'
ಅತ್ಯಾಚಾರ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಯನ್ನು ತಕ್ಷಣ ಬಂಧಿಸಬೇಕು. ಅತ್ಯಾಚಾರ ಪ್ರಕರಣದಲ್ಲಿ 164 ಹೇಳಿಕೆ ಕೊಟ್ಟ ಮೇಲೂ ಆರೋಪಿಯನ್ನು ಏಕೆ ಬಂಧಿಸಿಲ್ಲ. ಇಡೀ ದೇಶದಲ್ಲಿ ಇಂತಹ ಬೆಳವಣಿಗೆ ಎಲ್ಲಿಯಾದರೂ ನೋಡಲು ಸಾಧ್ಯನಾ?, ಗೃಹಸಚಿವರು ಅವರನ್ನು ರಕ್ಷಿಸುತ್ತಿದ್ದಾರೆ. ತನಿಖಾಧಿಕಾರಿಯನ್ನು ರಜೆ ಮೇಲೆ ಕಳುಹಿಸಿದ್ದಾರೆಂದರೆ ಇದರ ಅರ್ಥ ಏನು?ಎಂದು ಅಸಮಾಧಾನ ಹೊರಹಾಕಿದರು.
ಈ ಸುದ್ದಿಯನ್ನೂ ಓದಿ: CD case: ರಮೇಶ್ ಜಾರಕಿಹೊಳಿ ಬಂಧನ, ಬೊಮ್ಮಾಯಿ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ