ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 16.06 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಇದರ ಒಟ್ಟು ಟಿಕೆಟ್ ಮೌಲ್ಯ 405.24 ಕೋಟಿ ರೂ. ಗಳಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂನ್ 11ರಿಂದ ಸಪ್ಟೆಂಬರ್ ಅಂತ್ಯದವರೆಗೆ ಒಟ್ಟು 16.06 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ಗಳ ಮೌಲ್ಯ ರೂ. 405.24 ಕೋಟಿ ಗಳಾಗಿದೆ.
ತಿಂಗಳುವಾರು ಉಚಿತ ಪ್ರಯಾಣ ಮಾಡಿದ ಮಹಿಳೆಯರು, ಪ್ರಯಾಣದ ಟಿಕೆಟ್ ಮೌಲ್ಯ:
ತಿಂಗಳು | ಮಹಿಳೆಯರು (ಕೋಟಿ ಗಳಲ್ಲಿ) | ಟಿಕೆಟ್ ಮೌಲ್ಯ (ಕೋಟಿ ರೂ.ಗಳಲ್ಲಿ) |
ಜೂನ್ 11ರಿಂದ 30 | 2.55 | 64.99 |
ಜುಲೈ 1ರಿಂದ 31 | 4.47 | 111.85 |
ಆಗಸ್ಟ್1ರಿಂದ 31 | 4.61 | 115.45 |
ಸೆಪ್ಟೆಂಬರ್ 1ರಿಂದ 30 | 4.43 | 112.95 |
ಜೂನ್ 11ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಆರಂಭದ ದಿನಗಳಲ್ಲಿ ಕೆಲವು ಸಣ್ಣಪುಟ್ಟ ತೊಂದರೆ ಉಂಟಾಗಿರುವುದನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿರುವುದಿಲ್ಲ. ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯೋಜನೆ ಯಶಸ್ವಿಯಾಗಿ ಮುಂದುವರೆದಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.