ಹುಬ್ಬಳ್ಳಿ: ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ ಗಂಭೀರ ಆರೋಪದ ಮೇಲೆ ಶಾಲಾ ಶಿಕ್ಷಕನನ್ನು ಕಮರಿಪೇಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಡಿಸೆಂಬರ್ 23ರಂದು ಘಟನೆ ನಡೆದಿದೆ.
ಶಾಲೆಯಲ್ಲಿ ಮಕ್ಕಳನ್ನು ಊಟಕ್ಕೆ ಬಿಟ್ಟ ಸಂದರ್ಭದಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಆರೋಪಿ ಶಿಕ್ಷಕ, ಶಾಲೆಯ ಕೊಠಡಿಯಲ್ಲಿ 11 ವರ್ಷದ ಬಾಲಕಿಗೆ ಕಿರುಕುಳ ನೀಡಿದ್ದ. ಮೈ, ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿಯ ಪೋಷಕರು ದೂರಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಶಾಲೆಗೂ ಬಂದು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಶಿಕ್ಷಕನನ್ನು ಬಂಧಿಸಿದ್ದಾರೆ.
ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಭದ್ರತಾ ಸಿಬ್ಬಂದಿ ಹಿಡಿದು ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಡಿಸೆಂಬರ್ 8ರಂದು ಬೆಳಿಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈ ಕೈ ಮುಟ್ಟಿ ಆರೋಪಿ ಕಿರುಕುಳ ನೀಡಿದ್ದ. ಯುವತಿ ಕೂಗುತ್ತಿದ್ದಂತೆ ಆರೋಪಿ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ್ದು, ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ವಶಕ್ಕೆ ಪಡೆದಿದ್ದರು.
ಬಳಿಕ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿ ಈ ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯ ವೇಳೆ ಬಯಲಾಗಿದೆ. ಆರೋಪಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: ಮೈಸೂರು: ಪ್ರವಾಸದ ವೇಳೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಮುಖ್ಯಶಿಕ್ಷಕನ ವಿರುದ್ಧ ಗಂಭೀರ ಆರೋಪ