ಗಂಡು ಮಗುವೇ ಬೇಕು ಎನ್ನುವ ಹಂಬಲ ಜತೆಗೆ ಹೆಣ್ಣಿನ ಕುರಿತು ಇರುವ ತಾತ್ಸಾರ ಮನೋಭಾವವೋ ಏನೋ ತಿಳಿಯದು. ಮನುಷ್ಯ ಅದೆಷ್ಟೇ ಮುಂದುವರೆದರೂ ಪ್ರಸವ ಪೂರ್ವದಲ್ಲಿ ಲಿಂಗ ಪತ್ತೆ ಮಾಡಿಸಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಹೇಯ ಕೃತ್ಯ ಇನ್ನೂ ಹಲವೆಡೆ ಮುಂದುವರೆದಿರುವುದು ದುರಂತ. ಇಂತಹ ಕೃತ್ಯ ಕಣ್ಣಿಗೆ ಕಾಣದೇ ನಡೆಯುತ್ತಿರುವುದು ವಿಪರ್ಯಾಸ. ಹಾಗಂತ ಎಲ್ಲ ಪ್ರದೇಶಗಳಲ್ಲಿಯೂ ಹೀಗೆ ಎಂದು ಹೇಳಲು ಸಾಧ್ಯವಿಲ್ಲ.
ತಾಯಿ - ಮಗುವಿನ ರಕ್ಷಣೆಗೆ ಸದುಪಯೋಗವಾಗಲಿ ಎಂದು ತೆರದ ಸ್ಕಾನಿಂಗ್ ಸೆಂಟರ್ಗಳು ಇದೀಗ ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆಯಾಗುತ್ತಿರುವುದು ಮಾತ್ರ ವಿಪರ್ಯಾಸ. ಆದರೆ, ಧಾರವಾಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದಿಲ್ಲ ಎಂಬುದು ಆಶಾದಾಯಕ ವಿಚಾರ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು ಅನಧಿಕೃತ ನರ್ಸಿಂಗ್ ಹೋಂ ಗಳನ್ನು ನಡೆಸುತ್ತಿಲ್ಲ. ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳೂ ಇಲ್ಲ ಎನ್ನುತ್ತಾರೆ ಡಿಎಚ್ಒ ಡಾ. ಯಶವಂತ ಮದೀನಕರ.
ಜಿಲ್ಲೆಯಲ್ಲಿ 212 ಅಲ್ಟ್ರಾ ಸ್ಕ್ಯಾನಿಂಗ್ ಕೇಂದ್ರಗಳು ನೋಂದಣಿಯಾಗಿವೆ. ಆ ಪೈಕಿ 69 ಕೇಂದ್ರಗಳು ಸ್ಥಗಿತಗೊಂಡಿದ್ದು 143 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನೂ 12 ಸರ್ಕಾರಿ ಸ್ಕ್ಯಾನಿಂಗ್ ಕೇಂದ್ರಗಳಿವೆ. ಆ ಪೈಕಿ 1 ಕೇಂದ್ರ ಸ್ಥಗಿತಗೊಂಡಿದೆ. ಅನಧಿಕೃತ ಸ್ಕ್ಯಾನಿಂಗ್ ಯಂತ್ರಗಳಿವೆ ಎಂದು ಪರಿಶೀಲನೆ ಮಾಡುವುದರ ಜತೆಗೆ, ಈ ಹೀನ ಕೃತ್ಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನಿರಂತರವಾಗಿ ತಿಳಿವಳಿಕೆ ನೀಡುವ ಕಾರ್ಯ ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 148 ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೆಂಟರ್ಗಳಿದ್ದು, ಭ್ರೂಣಪತ್ತೆ ಕಾರ್ಯಗಳು ನಡೆಯುತ್ತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
2011ರ ಜನಗಣತಿ ಪ್ರಕಾರ ರಾಜ್ಯದ ಲಿಂಗಾನುಪಾತ 1,000 ಗಂಡಿಗೆ 948 ಹೆಣ್ಣಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹೆಣ್ಣಿನ ಪ್ರಮಾಣ 947 ಇದೆ. ಲಿಂಗಾನುಪಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೆಂಪು ಪಟ್ಟಿಯಲ್ಲಿದ್ದು, ಈ ಸಮಸ್ಯೆ ಹೋಗಲಾಡಿಸಲು ಆರೋಗ್ಯ ಇಲಾಖೆ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ.
ಜಿಲ್ಲೆಗಳಲ್ಲಿ ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳು ಇಲ್ಲ ಎಂಬುದು ಸಂತಸದ ವಿಚಾರ. ಆದಾಗ್ಯೂ ಕಣ್ಣಿಗೆ ಕಾಣದಂತೆ ಇಂತಹ ಹೀನ ಕೃತ್ಯಗಳು ನಡೆಯುತ್ತಿದ್ದರೆ, ಅದಕ್ಕೆ ಕೂಡಲೇ ಕೊನೆಗಾಣಿಸಬೇಕಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆಗೆ ಜನರೂ ಕೂಡ ಕೈಜೋಡಿಸಬೇಕಿದೆ.