ಹುಬ್ಬಳ್ಳಿ: ಎಪ್ರಿಲ್ 23(ಮಂಗಳವಾರ) ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಕ್ಷೇತ್ರ ಅಂತಿಮ ಸಿದ್ಧತೆಗಳನ್ನು ಕೈಗೊಂಡಿದೆ.
ಧಾರವಾಡ ಕ್ಷೇತ್ರದಿಂದ ಮೂರು ರಾಷ್ಟ್ರೀಯ ಪಕ್ಷಗಳ ಹಾಗೂ 6 ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 19 ಅಭ್ಯರ್ಥಿಗಳ ಹೆಸರುಗಳನ್ನು ಎರಡು ಬ್ಯಾಲೆಟ್ ಯಂತ್ರಗಳಲ್ಲಿ ಅಳವಡಿಸಲಾಗಿದೆ. 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1,872 ಮತಗಟ್ಟೆಗಳಿದ್ದು, 17,25,335 ಮತದಾರರಿದ್ದಾರೆ. ಇದರಲ್ಲಿ ಪುರುಷ ಮತದಾರರ ಸಂಖ್ಯೆ 8,75,479, ಮಹಿಳಾ ಮತದಾರರ ಸಂಖ್ಯೆ 8,49,750 ಹಾಗೂ ತೃತೀಯ ಲಿಂಗ ಮತದಾರರ ಸಂಖ್ಯೆ 106 ಇದೆ. ಇನ್ನು ಇವರಲ್ಲಿ 2,105, ಸೇವಾ ಮತದಾರರು, 13,159 ವಿಕಲಚೇತನ ಮತದಾರರಿದ್ದರೆ, ಮೊದಲ ಬಾರಿಗೆ ಹಕ್ಕು ಚಲಾಯಿಸುತ್ತಿರುವವರ ಸಂಖ್ಯೆ 33,144 ಇದೆ.
ಇನ್ನು ಚುನಾವಣಾ ಆಯೋಗವು ಸರ್ವ ಸಿದ್ದತೆಗಳನ್ನು ಕೈಗೊಂಡಿದ್ದು, ಮತದಾನಕ್ಕೆ ಒಟ್ಟು 10,109 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಆಯೋಜಿಸಲಾಗಿದೆ. ಅಷ್ಟೇ ಅಲ್ಲದೆ, 550 ವಾಹನಗಳು, 16 ಸಖಿ ಮತಗಟ್ಟೆಗಳು, 7 ವಿಶೇಷ ಚೇತನರ ಮತಗಟ್ಟೆಗಳು ಹಾಗೂ 391 ಸೂಕ್ಷ್ಮ ಮತಗಟ್ಟೆಗಳನ್ನು ತೆರೆಯಲಾಗಿದೆ.
ಈಗಾಗಲೇ 1,106 ಪೊಲೀಸ್ ಸಿಬ್ಬಂದಿ, 8 ಮಂದಿ ಡಿವೈಎಸ್ಪಿಗಳು, 21 ಇನ್ಸ್ಪೆಕ್ಟರ್ಗಳು, 81 ಎಸ್ಐಗಳು, 600 ಗೃಹ ರಕ್ಷಕ ಸಿಬ್ಬಂದಿ ಹಾಗೂ ಅರೆ ಸೇನಾಪಡೆ ಸಿಬ್ಬಂದಿ ಮತಗಟ್ಟೆಗಳಿಗೆ ಭದ್ರತೆ ನೀಡುತ್ತಿದ್ದಾರೆ.