ಹುಬ್ಬಳ್ಳಿ : ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿರುವ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಲು ಮಕ್ಕಳನ್ನು ಹೆಚ್ಚಾಗಿ ಸರ್ಕಾರಿ ಶಾಲೆಗೆ ದಾಖಲಿಸಿ. ಮಕ್ಕಳು ಉತ್ತಮ ಹಾಜರಾತಿಯೊಂದಿಗೆ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಬೇಕು. ಈ ಮೂಲಕ ಆದರ್ಶ ಬದುಕು ಕಟ್ಟಿಕೊಳ್ಳಬೇಕು ಎಂದು ತಾಪಂ ಇಒ ಗಂಗಾಧರ ಕಂದಕೂರ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಕಟ್ನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಪಂ ವತಿಯಿಂದ ಆಯೋಜಿಸಲಾದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್-19ರ ನಿಯಮಗಳನ್ನು ಪಾಲಿಸಲಾಗಿದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶಾಲಾ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಎಂದರು.
ಜಿಪಂ ಅಕ್ಷರ ದಾಸೋಹ ಯೋಜನಾಧಿಕಾರಿ ಬಿ ಎಸ್ ಮಾಯಾಚಾರ್ ಮಾತನಾಡಿ, ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಮಕ್ಕಳು ಅವುಗಳ ಪ್ರಯೋಜನ ಪಡೆಯಬೇಕು ಎಂದರು.
ಶಾಲೆಗೆ ಆಗಮಿಸಿದ ಮಕ್ಕಳಿಗೆ ಅಕ್ಕಿಯ ತಟ್ಟೆಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು. ಓದುವ ಬೆಳಕು ಕಾರ್ಯಕ್ರಮದ ಮೂಲಕ ಜೋಳಿಗೆ ಹಿಡಿದು ಸಮುದಾಯದಿಂದ ಪುಸ್ತಕಗಳನ್ನು ಸಂಗ್ರಹಿಸಲಾಯಿತು. ತಾಪಂ ಅಧ್ಯಕ್ಷೆ ಚೆನ್ನಮ್ಮ ಗೊರ್ಲ ಅವರು ನೋಟ್ಬುಕ್ ಮತ್ತು ಪೆನ್ ವಿತರಿಸಿದರು. ಇಕ್ರಾ ಮತ್ತು ಅಗಸ್ತ್ಯ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು.