ಧಾರವಾಡ : ಶಿಥಿಲಗೊಂಡ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈ ಕುರಿತು ಈಟಿವಿ ಭಾರತ್ ವಿಸ್ತೃತವಾದ ವರದಿ ಬಿತ್ತರಿಸಿತ್ತು.
ವಿದ್ಯಾರ್ಥಿನಿಯರು ಕೊಡೆ ಹಿಡಿದುಕೊಂಡು ಪಾಠ ಕೇಳುವ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಉಪನ್ಯಾಸಕರು ಸಹ ಮಳೆಯಲ್ಲಿಯೇ ಪಾಠ ಮಾಡುತ್ತಿದ್ದರು. ಕಾಲೇಜಿನ ಹಂಚಿನ ಮಾಳಿಗೆ ಸಂಪೂರ್ಣವಾಗಿ ಹಾನಿಯಾದ ಹಿನ್ನೆಲೆ ಸೋರುತ್ತಿದೆ. ಇದರಿಂದ ವಿದ್ಯಾರ್ಥಿನಿಯರ ಮೇಲೆ ಮಣ್ಣು, ಮಳೆ ನೀರು ಬಿದ್ದು ಕ್ಲಾಸ್ ಕೇಳಲು ಅನಾನುಕೂಲವಾಗುತ್ತಿತ್ತು.
ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಹತ್ತಿರವಿರುವ ಸರ್ಕಾರಿ ಮಹಿಳಾ ಕಾಲೇಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ಅಲ್ಲಿನ ಕಟ್ಟಡ ಸೋರಿಕೆ ಹಾಗೂ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಕಾಲೇಜಿನಲ್ಲಿ ಸುಮಾರು 343 ವಿದ್ಯಾರ್ಥಿನಿಯರು ಇದ್ದು, ಫಲಿತಾಂಶ ಕೂಡ ಉತ್ತಮವಾಗಿದೆ. ಗುಣಮಟ್ಟದ ಶಿಕ್ಷಣ ಸಹ ಸಿಗುತ್ತಿದೆ. ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿನಿಯರು ವ್ಯಾಸಂಗಕ್ಕಾಗಿ ಈ ಒಂದು ಕಾಲೇಜಿಗೆ ಬರುತ್ತಿದ್ದರು. ಬಿಎ, ಬಿಕಾಂ ಸೇರಿದಂತೆ ವಿವಿಧ ಕೋರ್ಸ್ಗಳು ಕಾಲೇಜಿನಲ್ಲಿ ಲಭ್ಯವಿದೆ.
ಸೂಕ್ತ ನೀಲನಕ್ಷೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ: ಕಾಲೇಜಿಗೆ ನೂತನ ಕಟ್ಟಡದ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ ಅನುದಾನ ಪೂರೈಸಲು ಕ್ರಮ ವಹಿಸಲಾಗುವುದು. ಇದೊಂದು ಐತಿಹಾಸಿಕ ಕಟ್ಟಡವಾಗಿದ್ದು, ಕಾಲೇಜು ಕಟ್ಟಡದ ಸದ್ಯದ ವಿನ್ಯಾಸ ಉಳಿಸಿಕೊಂಡು ಕಟ್ಟಡ ದುರಸ್ತಿ ಮಾಡಿ ಕಾಲೇಜು ಬಳಕೆಗೆ ನೀಡಲಾಗುವುದು. ರಾಜ್ಯ ಸರ್ಕಾರವು ಈಗಾಗಲೇ ಮಹಿಳಾ ಕಾಲೇಜು ನೂತನ ಕಟ್ಟಡಕ್ಕೆ ಸುಮಾರು 1 ಎಕರೆ ಭೂಮಿಯನ್ನು ಈ ಕಟ್ಟಡ ಸೇರಿ ಮಂಜೂರು ಮಾಡಿದೆ. ಕಟ್ಟಡ ಹೊರತಾದ ಜಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ಸೂಕ್ತ ನೀಲನಕ್ಷೆ ನೀಡುವಂತೆ ಅಧಿಕಾರಿಗಳಿಗೆ ಸಚಿವ ಲಾಡ್ ತಿಳಿಸಿದರು.
ಕಟ್ಟಡ ಹಳೆಯದಾಗಿರುವುದರಿಂದ ಸೋರಿಕೆ: ಸರ್ಕಾರಿ ಮಹಿಳಾ ಪದವಿ ಕಾಲೇಜು ನಡೆಯುತ್ತಿರುವ ಕಟ್ಟಡ ಸುಮಾರು 130 ವರ್ಷಗಳ ಐತಿಹಾಸಿಕ, ಸುಂದರವಾದ ಕಟ್ಟಡವಾಗಿದೆ. ಇದನ್ನು ಪುನರುಜ್ಜೀವನಗೊಳಿಸಲು ತಕ್ಷಣ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಅತಿಯಾದ ಮಳೆಯಿಂದಾಗಿ ಮತ್ತು ಕಟ್ಟಡ ಹಳೆಯದಾಗಿರುವುದರಿಂದ ಸೋರಿಕೆಯಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವುದರಿಂದ ಈ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ನಡೆಸದಂತೆ ಸಚಿವರು ಸೂಚಿಸಿದರು.
ಕಟ್ಟಡದಲ್ಲಿ ಕ್ಲಾಸ್‍ರೂಂಗಳ ವ್ಯವಸ್ಥೆ ಮಾಡಲಾಗಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕರೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳ ದಿನನಿತ್ಯದ ಪಾಠ, ಪ್ರವಚನಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡದಲ್ಲಿ ಕ್ಲಾಸ್‍ರೂಂಗಳ ವ್ಯವಸ್ಥೆ ಮಾಡಲಾಗಿದೆ. ಮಳೆ ಕಡಿಮೆಯಾದ ತಕ್ಷಣ ಪ್ರಸ್ತುತ ಕಟ್ಟಡದ ಒಳಭಾಗದ ಕಟ್ಟಿಗೆ, ಹಂಚುಗಳನ್ನು ಬದಲಾಯಿಸಿ ದುರಸ್ತಿ ಮಾಡಲು ನಿರ್ಧರಿಸಲಾಗಿದೆ. ಮಂಜೂರಿಯಾಗಿರುವ ಜಾಗಕ್ಕೆ ನೂತನ ಕಟ್ಟಡದ ನೀಲನಕ್ಷೆ ಸಿದ್ಧಗೊಳಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕಟ್ಟಿದ 4 ವರ್ಷಕ್ಕೇ ಸೋರುತ್ತಿರುವ ಕೋಟಿ ರೂ. ವೆಚ್ಚದ ಪೌರಕಾರ್ಮಿಕರ ಕಟ್ಟಡ.. ಕುಡಿಯುವ ನೀರಿನ ಬಾವಿ ಸೇರುತ್ತಿದೆ ಶೌಚದ ನೀರು