ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯೂ ನಡೆಯುತ್ತಿದೆ. ಆದ್ರೂ ವಾಣಿಜ್ಯ ನಗರಿಯಲ್ಲಿ ಸಂಚರಿಸಲು ಸರಿಯಾದ ರಸ್ತೆಯಿಲ್ಲ. ರಸ್ತೆಯಿದ್ದರೂ ರಸ್ತೆಗಳೆಲ್ಲ ಅವು ತಗ್ಗು ಗುಂಡಿಗಳಿಂದ ತುಂಬಿದ ಕೆರೆಗಳು.
ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ಮಳೆ ನೀರು ತುಂಬಿ ಅಪಾಯಕ್ಕೆ ಎಡೆಮಾಡಿ ಕೊಡುತ್ತಿವೆ. ಹೆಗ್ಗೇರಿಯ ಸ್ಮಶಾನದ ಹತ್ತಿರವಿರುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಂತೂ ಕೆರೆಯೋಪಾದಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ಎಲ್ಲೆಂದರಲ್ಲಿ ಗುಂಡಿಗಳು ಬಾಯ್ತೆರದು ನಿಂತಿದ್ದು, ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು ಇಲ್ಲಿ ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ಕಣ್ಣು ಹಾಯಿಸದೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಮಹಾನಗರ ಪಾಲಿಕೆ ವಿರುದ್ದ ಸ್ಥಳಿಯರು ಹಿಡಿಶಾಪ ಹಾಕುತ್ತಿದ್ದಾರೆ.