ಹುಬ್ಬಳ್ಳಿ: ಮಳೆಯಾದರೆ ಸಾಕು ರಸ್ತೆ ಯಾವುದು? ಗುಂಡಿ ಯಾವುದು? ಎಂಬ ಆತಂಕದಲ್ಲಿಯೇ ವಾಹನ ಸವಾರರು ನಿತ್ಯರೋದನೆ ಪಡುವ ದುಃಸ್ಥಿತಿ ಎದುರಾಗಿದೆ. ರಸ್ತೆಯ ಅವ್ಯವಸ್ಥೆ ಖಂಡಿಸಿ ನಗರದ ಜನತೆ ಪಾಲಿಕೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಮಾರ್ಟ್ಸಿಟಿ ಅಷ್ಟೇ ಅಲ್ಲದೇ ರಾಜ್ಯದ ಎರಡನೇ ರಾಜಧಾನಿ ಎಂದೇ ಬಿಂಬಿತವಾಗಿದೆ. ಆದರೆ, ಈ ನಗರದಲ್ಲಿ ಇದೀಗ ಎಲ್ಲಿ ನೋಡಿದರೂ ಗುಂಡಿಗಳು ಕಂಡು ಬರುತ್ತಿವೆ. ರಸ್ತೆ ಯಾವುದು?, ಗುಂಡಿ ಯಾವುದು? ಅಲ್ಲದೇ ಹಳ್ಳ ಯಾವುದು ಎಂಬುದೇ ವಾಹನ ಸವಾರರಿಗೆ ದೊಡ್ಡ ಪ್ರಶ್ನೆಯಾಗಿದೆ.
ಹುಬ್ಬಳ್ಳಿಯ ಬಸವವನ ಹತ್ತಿರದ ರಸ್ತೆ ಸೇರಿದಂತೆ ನಗರದ ವಿವಿಧೆಡೆಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಬೇಕಾದರೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸವಾರರಂತೂ ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಾಗಿದೆ.
ಇನ್ನೂ ಇದೇ ರಸ್ತೆಯಲ್ಲಿಯೇ ಆಸ್ಪತ್ರೆಗಳು ಸಹ ಇದ್ದು, ರೋಗಿಗಳಾಗಲಿ ಅಥವಾ ಗರ್ಭಿಣಿಯರಾಗಲಿ ಆಟೋದಲ್ಲಿಯೇ ಈ ರಸ್ತೆಯಲ್ಲಿ ಸಾಗಬೇಕಾಗಿದೆ. ಅವರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಜನಪ್ರತಿನಿಧಿಗಳು ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಆದರೆ, ಅವಳಿನಗರದ ಅಭಿವೃದ್ಧಿಯ ಚಿಂತೆ ಅವರಿಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ 500 ರಿಂದ 600 ಕೋಟಿ ಅನುದಾನದಲ್ಲಿ ಕೆಲಸವಾಗುತ್ತಿದೆ. ರಸ್ತೆ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ನಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಕಷ್ಟು ಅನುದಾನ ನುಂಗಿ ನೀರು ಕುಡಿದಿದೆ ಎಂಬುದನ್ನು ಕೇಳುತ್ತಿದ್ದೇವೆ. ಹಾಗಾದರೆ, ಅದೆಲ್ಲ ಎಲ್ಲಿ ಹೋಯ್ತು? ಎನ್ನುವ ಪ್ರಶ್ನೆ ಬಂದಾಗ ರಸ್ತೆಯಲ್ಲಿನ ಗುಂಡಿಗಳು ನುಂಗಿವೆಯೇ? ಪಾಲಿಕೆ ಅವರು ನುಂಗಿದ್ರಾ ಅಥವಾ ಜನಪ್ರತಿನಿಧಿಗಳು ನುಂಗಿದ್ರಾ? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಓದಿ: ವಿಜಯಪುರ: ಹೆಚ್ಚುತ್ತಿರುವ ಅಪಘಾತ ತಪ್ಪಿಸಲು ವಿಶಿಷ್ಟ ಆಚರಣೆಗೆ ಮುಂದಾದ ಜನ