ಹುಬ್ಬಳ್ಳಿ: ಇಷ್ಟು ದಿನ ಕಸಕಡ್ಡಿ ಹಾಗೂ ಅಶುಚಿತ್ವದಿಂದ ಗೋಚರಿಸುತ್ತಿದ್ದ ನಗರದ ಹೊಸ ಬಸ್ ನಿಲ್ದಾಣ ಈಗ ಹೊಸ ಚೈತನ್ಯ ಪಡೆದುಕೊಂಡಿದ್ದು, ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ನಿತ್ಯ ಸಾವಿರಾರು ಜನರು ಬಂದು ಹೋಗುವ ಹೊಸ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿತ್ತು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ನಿರ್ದೆಶನದ ಕಾರ್ಯವೈಖರಿಯಿಂದ ಈಗ ಬಸ್ ನಿಲ್ದಾಣ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ರೆವಲ್ಯೂಷನ್ ಮೈಂಡ್ ಸಹಭಾಗಿತ್ವದಲ್ಲಿ ಈಗ ಉತ್ತಮ ಪರಿಸರ ಸಂರಕ್ಷಣೆ ಕಲಾಕೃತಿಗಳಿಂದ ಈಗ ಹೊಸ ಬಸ್ ನಿಲ್ದಾಣ ಹೊಸ ರೂಪ ಪಡೆದು ಕೊಂಡಿದೆ.
ಬಸ್ ನಿಲ್ದಾಣದಲ್ಲಿ ಅಗತ್ಯವಿರುವ ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿಯಬೇಕು. ಎರಡೂ ಅಂಕಣಗಳ ಸಮುಚ್ಚಯಗಳ ನಡುವಿನ ಖಾಲಿ ಜಾಗದಲ್ಲಿ ಲಾನ್ ನಿರ್ಮಿಸುವ ಕೆಲಸ ಆಗಬೇಕು. ನಿಲ್ದಾಣದ ಪ್ರವೇಶ - ನಿರ್ಗಮನ ದ್ವಾರಗಳಿಗೆ ಸಾಕಷ್ಟು ಬೆಳಕಿನೊಂದಿಗೆ ಆಕರ್ಷಕ ಸ್ವಾಗತ ಕಮಾನು, ನಾಮಫಲಕ ಅಳವಡಿಸಬೇಕು. ಗಿಡಮರಗಳಿಗೆ ಬಣ್ಣದ ವಿದ್ಯುತ್ ದೀಪಾಲಂಕಾರ. ಈಗಿರುವ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳವನ್ನು ತೆರವುಗೊಳಿಸಿ ನಿಲ್ದಾಣದ ಒಳಭಾಗದಲ್ಲಿರುವ ಖಾಲಿ ಜಾಗಕ್ಕೆ ಸ್ಥಳಾಂತರಿಸಬೇಕು ಎಂಬಂತಹ ಹತ್ತು ಹಲವು ಕನಸನ್ನು ಕಂಡಿದ್ದ ಸಾರಿಗೆ ಸಂಸ್ಥೆ ರೆವಲ್ಯೂಷನ್ ಮೈಂಡ್ ಉತ್ಸಾಹಿ ಯುವ ತಂಡದ ಸಹಕಾರದೊಂದಿಗೆ ಬಸ್ ನಿಲ್ದಾಣವನ್ನು ಕಲಾಕೃತಿಗಳಿಂದ ಪ್ರಜ್ವಲಿಸುವಂತೆ ಮಾಡಿದೆ.
ಇನ್ನೂ ಉತ್ಸಾಹಿ ಯುವ ತಂಡ ನಿಜಕ್ಕೂ ಉತ್ತಮ ಕಾರ್ಯ ಮಾಡುತ್ತಿದ್ದು, ಹೊಸದೊಂದು ರೂಪ ನೀಡಿ ನಿಲ್ದಾಣವನ್ನು ಕಂಗೊಳಿಸುವಂತೆ ಮಾಡಿದೆ ಎಂದು ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ತಾವು ಮಾಡಿದ ಕಾರ್ಯದಿಂದ ತುಂಬಾ ಸಂತೋಷವಾಗಿದೆ ಎಂದು ರೆವಲ್ಯೂಷನ್ ಮೈಂಡ್ ತಂಡದ ಉತ್ಸಾಹಿಗಳು ಅಭಿಪ್ರಾಯ ಪಟ್ಟಿದ್ದಾರೆ.